Home ಟಾಪ್ ಸುದ್ದಿಗಳು ಚಿಂತಾಮಣಿ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವು, ಓರ್ವ ಗಂಭೀರ

ಚಿಂತಾಮಣಿ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವು, ಓರ್ವ ಗಂಭೀರ

ಬೆಂಗಳೂರು:  ಬೆಸ್ಕಾಂನ 11 ಕೆವಿ ಸಾಮರ್ಥ್ಯ ದ ವಿದ್ಯುತ್ ತಂತಿಯ ಹಳೆಯ ವೈರ್ ಬದಲಾವಣೆ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಗುತ್ತಿಗೆ ಕಾರ್ಮಿಕರಿಗೆ ವಿದ್ಯುತ್ ಪ್ರವಹಿಸಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಸ್ಕಾಂನ ಚಿಂತಾಮಣಿ ಗ್ರಾಮೀಣ ವಿಭಾಗದ ಮುತುಕದಹಳ್ಳಿ ಬಳಿ ಬುಧವಾರ  ಸಂಜೆ ಸಂಭವಿಸಿದೆ.

ತಳಗವಾರದ 66/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಹಾದು ಹೋಗುವ ಎಫ್ 5 ಹೀರೆಕಟ್ಟಿಗನಹಳ್ಳಿ ಕೃಷಿ ವಿದ್ಯುತ್ ಸಂಪರ್ಕ ದ ಹಳೆ ವೈರ್ ಬದಲಾವಣೆ ಕಾರ್ಯದಲ್ಲಿ ನಿರತರಾಗಿದ್ದ ಗುತ್ತಿಗೆ ಕಾರ್ಮಿಕರಾದ ಹಾವೇರಿಯ ಸಂಜೀವ್ (22) ಮತ್ತು ಸಿದ್ದಪ್ಪ (19) ವಿದ್ಯುತ್ ಅಪಘಾತದಿಂದ ಸಂಜೆ 5.45ರ ಸಮಯದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಬಿಹಾರದ ಪರ್ವೇಜ್ (22) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕ್ಸಿತೆಗಾಗಿ ಆತನನ್ನು ಕೋಲಾರದ ಆರ್. ಎಲ್ . ಜಾಲಪ್ಪ ಆಸ್ಪತ್ತೆಗೆ ಸಾಗಿಸಲಾಗಿದೆ.

ಬೆಸ್ಕಾಂ ನ 11 ಕೆವಿ ವಿದ್ಯುತ್ ಸಾಮರ್ಥ್ಯ ದ ವೈರ್ ಬದಲಾವಣೆ ಗುತ್ತಿಗೆಯನ್ನು ತುಮಕೂರಿನ ಮೆ. ರಾಜಾ ಎಲೆಕ್ಟ್ರಿಕಲ್ಸ್ ಪಡೆದುಕೊಂಡಿದ್ದು, ವೈರ್ ಬದಲಾವಣೆ ಸಂದರ್ಭದಲ್ಲಿ  ರಾಜಾ ಎಲೆಕ್ಟ್ರಿಕಲ್ಸ್ ಸುರಕ್ಷತೆ ಮತ್ತು ಸಮರ್ಪಕ ಮೇಲ್ವಿಚಾರಣೆ ನಡೆಸಿಲ್ಲ ಎನ್ನಲಾಗಿದೆ. ಈ ವಿದ್ಯುತ್ ಅವಘಡದಲ್ಲಿ  ಬೆಸ್ಕಾಂನ ಲೋಪವಿಲ್ಲ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಸ್ಕಾಂನ ಕೋಲಾರದ ಅಧೀಕ್ಷಕ ಅಭಿಯಂತರರು, ಚಿಂತಾಮಣಿಯ ಕಾರ್ಯನಿರ್ವಾಹಕ ಎಂಜಿನಿಯರ್, ಬೆಸ್ಕಾಂನ ಚಿಂತಾಮಣಿ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಚಿಂತಾಮಣಿ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ತೆರಳಿದ್ದಾರೆ.

ಘಟನೆ ವಿವರ: 11ಕೆವಿ ವಿದ್ಯುತ್ ಸಾಮರ್ಥ್ಯ ದ ಕೃಷಿ ಫೀಡರ್ ವೈರ್ ಬದಲಾವಣೆಗೆ ಸಂಬಂಧಿಸಿದಂತೆ ಬೆಸ್ಕಾಂ ಚಿಂತಾಮಣಿ ವಿಭಾಗ ಲೈನ್ ಕ್ಲಿಯರೆನ್ಸ್ ಪಡೆದುಕೊಂಡು, ಮೆ. ರಾಜಾ ಎಲೆಕ್ಟ್ರಿಕಲ್ಸ್ ಗೆ ಗುತ್ತಿಗೆ ನೀಡಿತ್ತು.  ಹೀರೆಕಟ್ಟಿಗನಹಳ್ಳಿ ಸಮೀಪದ ಸಮೀಪ ವಿದ್ಯುತ್ ವಾಹಕವನ್ನು  ಎಳೆಯುವ ಸಂದರ್ಭದಲ್ಲಿ ಮೇಲಿನ ಭಾಗದಲ್ಲಿ ಹಾದುಹೋಗಿರುವ ಕೆಪಿಟಿಸಿಎಲ್ ನ ೬೬ ಕೆ.ವಿ. ಸಾಮರ್ಥ್ಯ ದ ವಿದ್ಯುತ್ ತಂತಿಗೆ ತಗಲಿ ಈ ಅವಘಡ ಸಂಭವಿಸಿದೆ ಎಂದು ಬೆಸ್ಕಾಂನ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರ ಮೃತ ದೇಹವನ್ನು ಚಿಂತಾಮಣಿಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version