ಚಿಕ್ಕಮಗಳೂರು: ಶೃಂಗೇರಿ ಮಠದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬೆಂಗಳೂರಿನ ಶ್ರೀರಂಗ ದೊರೈ ಆಸ್ಪತ್ರೆಗೆ ಸಲಕರಣೆ ಖರೀದಿಸಲು ಕರ್ಣಾಟಕ ಬ್ಯಾಂಕ್ ₹29.5 ಲಕ್ಷ ಕೊಡುಗೆ ನೀಡಿದೆ.
ಶೃಂಗೇರಿ ಶಾರದಾ ಪೀಠಕ್ಕೆ ಭಾನುವಾರ ಭೇಟಿ ನೀಡಿದ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಎಸ್ ಮಹಾಬಲೇಶ್ವರ ಭಟ್ ಅವರು ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಭಟ್, 8,500 ಕ್ಕೂ ಹೆಚ್ಚು ಸಿಬ್ಬಂದಿ ನಮ್ಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಬ್ಯಾಂಕ್ ದಾಖಲೆಯ ಲಾಭ ಗಳಿಸಿದೆ. 2024ರ ಫೆಬ್ರವರಿಯಲ್ಲಿ ಬ್ಯಾಂಕ್ ಶತಮಾನೋತ್ಸವ ಆಚರಿಸಲಿದೆ. ಆ ಸಂದರ್ಭದಲ್ಲಿ ಬ್ಯಾಂಕ್ ಸಾಕಷ್ಟು ವ್ಯವಹಾರ ಹಾಗೂ ಲಾಭದ ಗುರಿಯನ್ನು ಹೊಂದಿದೆ’ ಎಂದು ಹೇಳಿದರು.
‘ಸ್ಥಳೀಯ ಶಾರದಾ ಬ್ಯಾಂಕ್ ವಿಲೀನ ಮಾಡಿಕೊಂಡು ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗಲಿ’ ಎಂದು ವಿಧುಶೇಖರಭಾರತೀ ಸ್ವಾಮೀಜಿಗಳು ಹಾರೈಸಿದರು.
ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಹಯವದನ ಉಪಧ್ಯಾಯ, ಸ್ಥಳೀಯ ಶಾಖಾ ವ್ಯವಸ್ಥಾಪಕ ಶರತ್ ಕುಮಾರ್, ನೈನಾರಾಣಿ, ಸುಭಾಷ್ ಅಶ್ವತ್ಪುಿರ, ನಿರಂಜನ್, ಆದಿಶೇಷ, ಗಣೇಶ್, ಶಿವಪ್ರಸಾದ್, ಸತೀಶ್ ಹಾಗೂ ಸಿಬ್ಬಂದಿ ಪ್ರತೀಕ, ಬಾಲಗಂಗಾಧರ್, ರವಿಶಂಕರ್, ರಾಘವೇಂದ್ರ, ನವೀನ್ ಕುಮಾರ್ ಉಪಸ್ಥಿತರಿದ್ದರು.