ಚಿಕ್ಕಮಗಳೂರು: ಮಳೆಯಿಂದ ಬೆಳೆ ನಷ್ಟವಾಯಿತೆಂದು ಮನನೊಂದ ಕೃಷಿಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಕಿಬ್ಳಿ ಆಚೆಮನೆ ದೇವಗೋಡು ಗ್ರಾಮದ ಗಣೇಶ್ (38) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೈಲುತುತ್ತು ಸೇವಿಸಿ ಆತ್ಮಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.
ಗಣೇಶ ಜಮೀನಿಗಾಗಿ ಬ್ಯಾಂಕಿನಿಂದ 2 ಲಕ್ಷ ಹಾಗೂ ಇತರ 45 ಸಾವಿರ ಕೈ ಸಾಲ ಮಾಡಿದ್ದ. ಭಾರೀ ಮಳೆಯಿಂದಾಗಿ ಬೆಳೆದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಯಾದ ಪರಿಣಾಮ ಸಾಲವನ್ನು ತೀರಿಸುವ ಯೋಚನೆಯಲ್ಲಿ ಮುಳುಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ತಂದೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆಗಸ್ಟ್ 11 ರಂದು ವಿಷ ಸೇವಿಸಿ ವಾಂತಿ ಮಾಡುತ್ತ ನರಳಾಡುತ್ತಿದ್ದ ಗಣೇಶ್ ನನ್ನು ಗಮನಿಸಿದ ತಾಯಿ ಹಾಗೂ ಸಹೋದರ ಜಯಪುರದ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ ಕೊಪ್ಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.