Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಸರ್ಕಾರಿ ಶಾಲಾ ಆವರಣ

ಚಿಕ್ಕಮಗಳೂರು: ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಸರ್ಕಾರಿ ಶಾಲಾ ಆವರಣ

ಚಿಕ್ಕಮಗಳೂರು: ಸರ್ಕಾರಿ ಶಾಲೆಯೊಂದು ಸುತ್ತಮುತ್ತಲ ನಿವಾಸಿಗಳಿಂದಾಗಿ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ನರಕಯಾತನೆ ಅನುಭವಿಸುತ್ತಿರುವ ಘಟನೆ ನಗರದ ಶಂಕರಪುರದಿಂದ ವರದಿಯಾಗಿದೆ.

1ನೇ ತರಗತಿಯಿಂದ 7ನೇ ತರಗತಿವರೆಗೆ  75 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಮಕ್ಕಳು ಆಟ, ಪಾಠದಲ್ಲಿ ತಲ್ಲೀನರಾಗುವ ಈ ಶಾಲಾ ಆವರಣ ಸಂಜೆ ಆಗುತ್ತಿದ್ದಂತೆಯೇ ಪಡ್ಡೆಗಳ ಅಡ್ಡೆಯಾಗಿ ಮಾರ್ಪಡುತ್ತಿದೆ.

ಪ್ರತಿನಿತ್ಯ ಬೆಳಗ್ಗೆ ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆಯೇ  ಕಾಣಸಿಗುವ ಮದ್ಯದ ಬಾಟಲಿಗಳನ್ನು ತೆಗೆದು ಹೊರಹಾಕುವುದೇ ಶಿಕ್ಷಕರ ನಿತ್ಯ ಕಾಯಕವಾಗಿದೆ. ಇಷ್ಟಕ್ಕೇ ಸುಮ್ಮನಿರದ ಈ ಕುಡುಕರು ಕುಡಿದ ಮತ್ತಿನಲ್ಲಿ ಶಾಲೆಯ ಮೇಲ್ಛಾವಣಿ ಹಂಚುಗಳನ್ನು ಒಡೆದು ತೆಗೆದು ಶಾಲಾ ಕೊಠಡಿಯೊಳಗೆ ಪ್ರವೇಶಿಸಲು ಅನೇಕ ಭಾರೀ ಯತ್ನಿಸಿದ್ದು, ಇವರ  ಕಾಟದಿಂದ ಸ್ಥಳೀಯ ನಿವಾಸಿಗಳು, ಪೋಷಕರು ಮತ್ತು ಶಿಕ್ಷಕರು ರೋಸಿ ಹೋಗಿದ್ದಾರೆ.

ಶಾಲೆಯ ಸುತ್ತಲು ಕಂಪೌಂಡ್‌ ನಿರ್ಮಿಸಿದ್ದರೂ ಕಂಪೌಂಡ್‌ ಹಾರಿ ಶಾಲಾ ಆವರಣದೊಳಗೆ ಪ್ರವೇಶಿಸುವ ಈ ಪುಂಡರ ಹಾವಳಿಗೆ ಬೇಸತ್ತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜ್ಞಾನದೇಗುಲ ಕುಡುಕರ ಅಡ್ಡವಾಗಿರುವುದು ಅತ್ಯಂತ ಶೋಚನೀಯ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶಿಥಿಲಗೊಂಡಿರುವ ಬಿಸಿಯೂಟದ ಅಡುಗೆ ಕೋಣೆ, 75 ಮಕ್ಕಳಿಗೆ ಎರಡು ಶೌಚಾಲಯ ಸಾಕಾಗದ ಪರಿಸ್ಥಿತಿ, ಕೇವಲ 4 ಜನ ಶಿಕ್ಷಕರು, ಇದು  ಇಲ್ಲಿನ ಶೋಚನೀಯಾವಸ್ಥೆಯಾಗಿದೆ. 75 ವಿದ್ಯಾರ್ಥಿಗಳಿಗೆ 4 ಜನ ಶಿಕ್ಷಕರು, ಮತ್ತು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿರುವುದರಿಂದ ಗುಣಮುಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ.

1956ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ 1ರಿಂದ 7ನೇ ವರೆಗಿನ ತರಗತಿಗಳಿದ್ದು 11 ಕೊಠಡಿಗಳನ್ನು ಒಳಗೊಂಡಿದೆ. ಶಾಲಾ ಕಟ್ಟಡದ ಮೇಲ್ಛಾವಣಿಯ ಹಂಚುಗಳು ಶಿಥಿಲಗೊಂಡ ಪರಿಣಾಮ ಮಳೆ ಬಂದರೆ ಎಲ್ಲಾ ಕಡೆಗಳಲ್ಲಿ ನೀರು  ಸೋರುತ್ತಿರುತ್ತದೆ. ಇದರಿಂದ ಬೇಸತ್ತ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಿಂದ ಹಂಚುಗಳು ತೆಗೆಸಿ ಹೊಸ ಹಂಚುಗಳನ್ನು ಹಾಕಿಸಿದ್ದು, ಕಟ್ಟಡ ಸೋರುವುದರಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆ ಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿ, ಸಿಸಿ ಕ್ಯಾಮರಾ ಅಳವಡಿಸಿ ಪುಂಡರ ಹಾವಳಿ ತಪ್ಪಿಸುವ ಬಗ್ಗೆ ಗಮನಹರಿಸಬೇಕು ಎಂದು ಶಾಲಾ ಎಸ್‌ಡಿಎಂಸಿ ಸದಸ್ಯೆ ನಾಗಲತಾ ಮನವಿ ಮಾಡಿದ್ದಾರೆ.

Join Whatsapp
Exit mobile version