►► ಪ್ರತಿಭಟನೆ ವೇಳೆ NSUI ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ
ಬೆಂಗಳೂರು: NSUI ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ‘ಚಡ್ಡಿ ಸುಡುವ’ ಪ್ರತಿಭಟನೆ ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನೆ ಮುಂದೆ NSUI ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ವೇಳೆ ಹಲ್ಲೆ ನಡೆಸಲಾಗಿದ್ದು, ಹಲ್ಲೆಕೋರರನ್ನು ಶೀಘ್ರವೇ ಬಂಧಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದು, ‘ಹಿಂದೆ ಆರೆಸ್ಸೆಸ್ಸಿಗರು ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಹಾಕುತ್ತಿದ್ದಾರೆ. NSUI ಕಾರ್ಯಕರ್ತರು ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಸಾಂಕೇತಿಕವಾಗಿ ಚಡ್ಡಿ ಸುಟ್ಟಿದ್ದಾರೆ. ಆದರೆ ಕಾರ್ಯಕರ್ತರ ಮೇಲೆ ಮನೆಗೆ ಬೆಂಕಿ ಹಚ್ಚಲು ಬಂದ ಆರೋಪ ಹಾಕಲಾಗಿದೆ. ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರ ಮೇಲೆ ರೋಹಿತ್, ಮಂಜು ಎಂಬ ರೌಡಿಗಳು ಹಲ್ಲೆ ನಡೆಸಿದ್ದಾರೆ. ಗೂಂಡಾಗಳನ್ನು ಶೀಘ್ರವೇ ಬಂಧಿಸಬೇಕು. ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದೇ ಹೋದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಸಚಿವರ ಮನೆಯ ಒಳಗೆ ಯಾರೂ ಪ್ರವೇಶಿಸಿರಲಿಲ್ಲ, ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ, ಅದನ್ನೇ ತಿರುಚಿ ಆರೋಪ ಹೊರಿಸಲಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.