Home ಟಾಪ್ ಸುದ್ದಿಗಳು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಸೂಚನೆ

ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಮತ್ತು ಪ್ರಸ್ತುತ ಗುಜರಾತಿನ ಎರಡು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ. ಪೌರತ್ವ  ಕಾಯ್ದೆ 1955 ರ ಅಡಿಯಲ್ಲಿ ಪೌರತ್ವವನ್ನು ನೀಡುವ ಕ್ರಮದ ಕುರಿತು ಅಧಿಸೂಚನೆಯಲ್ಲಿ ತಿಳಿಸಿದೆ.

ಆದರೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ  2019 (ಸಿಎಎ) ಕುರಿತು ಯಾವುದೇ ವಿವರ ತಿಳಿಸಿಲ್ಲ.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಸಿಎಎ ಅವಕಾಶ ನೀಡುತ್ತದೆ.  ಆದರೆ ಈ ಕಾಯ್ದೆಯ ಅಡಿಯಲ್ಲಿನ ನಿಯಮಗಳನ್ನು ಸರ್ಕಾರ ಇನ್ನೂ ರೂಪಿಸದ ಕಾರಣ ಅದರ ಅಡಿಯಲ್ಲಿ ಇಲ್ಲಿಯವರೆಗೆ ಯಾರಿಗೂ ಪೌರತ್ವ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ..

ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಗುಜರಾತಿನ ಆನಂದ್ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲಿ ವಾಸಿಸುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಸೆಕ್ಷನ್ 5 ರ ಅಡಿಯಲ್ಲಿ ಭಾರತದ ನಾಗರಿಕರಾಗಿ ನೋಂದಾಯಿಸಲು ಅನುಮತಿಸಲಾಗುತ್ತದೆ ಅಥವಾ ಪೌರತ್ವ ಕಾಯ್ದೆ 1955 ರ  ಸೆಕ್ಷನ್ 6 ರ ಅಡಿಯಲ್ಲಿ ಮತ್ತು ಪೌರತ್ವ ನಿಯಮಗಳ (2009) ನಿಬಂಧನೆಗಳಿಗೆ ಅನುಗುಣವಾಗಿ ಪೌರತ್ವದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. 

ಗುಜರಾತ್ ನ ಎರಡು ಜಿಲ್ಲೆಗಳಲ್ಲಿ ವಾಸಿಸುವ ಅಂತಹ ಜನರು ತಮ್ಮ ಅರ್ಜಿಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು. ನಂತರ ಅದನ್ನು ಜಿಲ್ಲಾ ಮಟ್ಟದಲ್ಲಿ ಕಲೆಕ್ಟರ್ ಪರಿಶೀಲಿಸುತ್ತಾರೆ. ಅದರ ಮೇಲಿನ ಅರ್ಜಿ ಮತ್ತು ವರದಿಗಳನ್ನು ಏಕ ಕಾಲದಲ್ಲಿ ಕೇಂದ್ರ ಸರ್ಕಾರಕ್ಕೆ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Join Whatsapp
Exit mobile version