ನವದೆಹಲಿ: ಅಪರಾಧ ಕೃತ್ಯವೆಸಗಿ ಜೈಲಿಗೆ ಬರುವ ಆರೋಪಿಗಳನ್ನು ಪುನರಾವರ್ತಿತ ಆರೋಪಿಗಳ ಜೊತೆಗಿರಿಸದೆ ಪ್ರತ್ಯೇಕ ವಾರ್ಡ್ ಅಥವಾ ಸೆಲ್ ನಲ್ಲಿರಿಸುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಜೈಲುಗಳ ಭದ್ರತಾ ವೈಫಲ್ಯಗಳ ನಿವಾರಣೆ ಜತೆಗೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಕಾರಾಗೃಹಗಳ ಭದ್ರತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ 2025ರ ವೇಳೆಗೆ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಕೇಂದ್ರ ಸರಕಾರ ಈ ತೀರ್ಮಾನ ಕೈಗೊಂಡಿದೆ.
ಪದೇಪದೇ ಅಪರಾಧ ಎಸಗಿ ಕಾರಾಗೃಹ ಸೇರುವ ಆರೋಪಿಗಳಿರುವ ಸೆಲ್ ನಲ್ಲಿ ಮೊದಲ ಬಾರಿ ಅಪರಾಧವೆಸಗಿ ಬಂದ ಆರೋಪಿಗಳನ್ನು ಇರಿಸುವುದು ಸರಿಯಲ್ಲ. ಹಳೇ ಆರೋಪಿಗಳಿಂದ ಹೊಸಬರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ, ಹಳೇ ಆರೋಪಿಗಳು ಪ್ರತೀಕಾರ, ರೌಡಿಸಂ ಹಾಗೂ ಇನ್ನಿತರೆ ಸೆಟ್ಲ್ ಮೆಂಟ್ ಕೇಸ್ ಗಳಿಗೆ ಬಳಸಿಕೊಂಡಿರುವ ಉದಾಹರಣೆಗಳಿವೆ. ಆಕಸ್ಮಿಕ ಅಪರಾಧದಿಂದ ಜೈಲಿಗೆ ಬಂದವರಿಗೆ ಪಶ್ಚಾತಾಪ ಉಂಟಾಗಿ ಮತ್ತೆ ಕ್ರೈಂ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ. ಆದರೆ, ಹಳೇ ಆರೋಪಿಗಳಿಂದ ಪ್ರೇರೇಪಿತರಾದರೆ ಕಾನೂನು ಬಾಹಿರ ಕೃತ್ಯಗಳಲ್ಲೇ ಮುಂದುವರಿಯುತ್ತಾರೆ. ಆದ್ದರಿಂದ ಇಬ್ಬರನ್ನೂ ಪ್ರತ್ಯೇಕವಾಗಿರಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸಲಹೆ ಕೊಟ್ಟಿದೆ.
2016ಕ್ಕೆ ಹೋಲಿಸಿದರೆ 2021ರಲ್ಲಿ ದೇಶದ ಕೈದಿಗಳ ಸಂಖ್ಯೆಯಲ್ಲಿ ಶೇ.28 ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2016ರಲ್ಲಿ ದೇಶದಲ್ಲಿ 4.33 ಲಕ್ಷ ಕೈದಿಗಳಿದ್ದರು. 2021ರಲ್ಲಿ ಈ ಸಂಖ್ಯೆ 5.54 ಲಕ್ಷಕ್ಕೆ ಏರಿಕೆಯಾಗಿದೆ. 2021ರಲ್ಲಿ ಅಪರಾಧಿಗಳ ಸಂಖ್ಯೆ ಶೇ.9.5 ತಗ್ಗಿದ್ದರೆ ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ.45.8 ಏರಿಕೆಯಾಗಿದೆ. ನ್ಯಾಯಾಂಗ ವಶದಲ್ಲಿರುವ ಆರೋಪಿಗಳ ಸಂಖ್ಯೆ ಶೇ.12.3 ಹೆಚ್ಚಿದೆ. 5.54 ಲಕ್ಷ ಕೈದಿಗಳ ಪೈಕಿ 4.27 ಲಕ್ಷ ವಿಚಾರಣಾಧೀನ ಕೈದಿಗಳು, 1.22 ಲಕ್ಷ ಸಜಾಬಂಧಿ ಅಪರಾಧಿಗಳು, 3,470 ನ್ಯಾಯಾಂಗ ವಶದಲ್ಲಿರುವ ಆರೋಪಿಗಳು ಹಾಗೂ 547 ಮಂದಿ ಇತರೆ ಆರೋಪಿಗಳು ಸೇರಿದ್ದಾರೆ.
ಅಲ್ಲದೆ ಜೈಲಿನಲ್ಲಿರುವ ಕೈದಿಗಳ ಚಿಕಿತ್ಸೆಗಾಗಿ ಹೊರಗಿನ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದು ಅಷ್ಟೊಂದು ಸರಿಯಲ್ಲ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಮೊಬೈಲ್, ಗಾಂಜಾ, ಶಸ್ತ್ರಾಸ್ತ್ರ ಸೇರಿ ಇನ್ನಿತರ ನಿಷೇಧಿತ ವಸ್ತುಗಳ ಪೂರೈಕೆಗೂ ಕಡಿವಾಣ ಹಾಕಲು ಎಕ್ಸ್ ರೇ ಬ್ಯಾಗೇಜ್ ಸ್ಕ್ಯಾನರ್, ಸರ್ಚ್ ಮೆಟಲ್ ಡಿಟೆಕ್ಟರ್ ಸೇರಿ ಇನ್ನಿತರ ತಂತ್ರಜ್ಞಾನ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ದೇಶದಲ್ಲಿ ಒಟ್ಟು 1350 ಜೈಲುಗಳಿವೆ. ಇದರಲ್ಲಿ 617 ಉಪ ಜೈಲುಗಳು, 410 ಜಿಲ್ಲಾ ಜೈಲುಗಳು, 144 ಸೆಂಟ್ರಲ್ ಜೈಲುಗಳು, 86 ಒಪೆನ್ ಜೈಲುಗಳು, 41 ವಿಶೇಷ ಕಾರಾಗೃಹಗಳು, 31 ಮಹಿಳಾ ಜೈಲುಗಳು, 19 ಬಾಲಾಪರಾಧ ಸುಧಾರಣಾ ಜೈಲುಗಳು.