ಹೊಸದಿಲ್ಲಿ: ಕಳೆದ ಏಳು ವರ್ಷಗಳಲ್ಲಿ ಅತ್ಯಾಚಾರ, ದುಶ್ಚಟ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಇತರ ಸೆಕ್ಷನ್ ಗಳಂತಹ ಲೈಂಗಿಕ ಅಪರಾಧಗಳಿಗಾಗಿ 177 ಬಾಲಾಪರಾಧಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರ್ ಟಿಐ ಬಹಿರಂಗಪಡಿಸಿದೆ.
ಒಂದೇ ಎಫ್ಐಆರ್ ಗೆ ಸಂಬಂಧಿಸಿದಂತೆ 177 ಜನರಲ್ಲಿ ಐವರನ್ನು ಬಂಧಿಸಲಾಗಿದ್ದು, ನಂತರ ಬಾಲಾಪರಾಧಿ ನ್ಯಾಯ ಮಂಡಳಿ ಅವರನ್ನು ದೋಷಿ ಎಂದು ಘೋಷಿಸಿದೆ ಎಂದು ಆರ್ ಟಿಐ ತಿಳಿಸಿದೆ. ಪೋಕ್ಸೋ ಪ್ರಕರಣಗಳಲ್ಲಿ ಅಪರಾಧಿಗಳು ಮತ್ತು ಸಂತ್ರಸ್ತರು ಇಬ್ಬರೂ ಅಪ್ರಾಪ್ತರೇ ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ಶೇ. 92ರಷ್ಟು ಪ್ರಕರಣಗಳಲ್ಲಿ ಬಂಧಿತ ಬಾಲಾಪರಾಧಿಗಳು ಸಂತ್ರಸ್ತರಿಗೆ ಪರಿಚಿತರು ಎಂಬುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂಡೀಗಢ ನೈಋತ್ಯ ಮತ್ತು ಈಶಾನ್ಯದ ಪೊಲೀಸ್ ಉಪ ವಿಭಾಗಗಳಲ್ಲಿ ಅತ್ಯಾಚಾರ ಎಸಗಿದ್ದಕ್ಕಾಗಿ ಹೆಚ್ಚಿನ ಬಾಲಾಪರಾಧಿಗಳನ್ನು ಬಂಧಿಸಲಾಗಿದೆ ಎಂದು ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಜನವರಿ 1, 2015 ರಿಂದ ಜುಲೈ 31, 2022 ರ ನಡುವೆ ಬಂಧಿಸಲ್ಪಟ್ಟ ಬಾಲಾಪರಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಒಟ್ಟು 1,026 ಬಾಲಾಪರಾಧಿಗಳನ್ನು ಬಂಧಿಸಲಾಗಿದೆ.
ಕಳೆದ ಏಳು ವರ್ಷಗಳಲ್ಲಿ ಬಂಧಿತರಾಗಿರುವ 1,026 ಬಾಲಪರಾಧಿಗಳಲ್ಲಿ 459 ಬಾಲಾಪರಾಧಿಗಳು ಖುಲಾಸೆಗೊಂಡಿದ್ದಾರೆ. 312 ಬಾಲಾಪರಾಧಿಗಳು ಶಿಕ್ಷೆ ಅನುಭವಿಸುತ್ತಿದ್ದರೆ, ಶೇ. 255 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಬಂಧಿತರಾಗಿರುವ ಬಾಲಾಪರಾಧಿಗಳಲ್ಲಿ ಕಳ್ಳತನ, ವಾಹನ ಕಳ್ಳತನ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಬಾಲಾಪರಾಧಿಗಳನ್ನು ಬಂಧಿಸಿರುವ ಪ್ರಕರಣಗಳೇ ಹೆಚ್ಚಾಗಿವೆ.
ಕದ್ದ ವಾಹನಗಳಿಗೆ ನಕಲಿ ನೋಂದಣಿ ಸಂಖ್ಯೆ ಪ್ಲೇಟ್ ಬಳಸಿದ್ದಕ್ಕಾಗಿ 18 ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದರೂ, ಒಬ್ಬನೇ ಒಬ್ಬ ಬಾಲಾಪರಾಧಿ ವಂಚನೆ ಅಥವಾ ಫೋರ್ಜರಿ ಮಾಡಿದ ಕಾರಣಕ್ಕಾಗಿ ಬಂಧಿಸಲಾಗಿಲ್ಲ ಎಂಬುದನ್ನು ಮಾಹಿತಿ ಹಕ್ಕು ವರದಿಯಲ್ಲಿ ತಿಳಿದುಬಂದಿದೆ.
ನಕಲಿ ನೋಂದಣಿ ಸಂಖ್ಯೆ ಪ್ಲೇಟ್ ಗಳನ್ನು ಬಳಸಿದ್ದಕ್ಕಾಗಿ ಬಂಧಿತರಾಗಿರುವ 18 ಬಾಲಾಪರಾಧಿಗಳಲ್ಲಿ 14 ಮಂದಿಗೆ ಶಿಕ್ಷೆ ವಿಧಿಸಲಾಗಿದ್ದು, ಮೂವರನ್ನು ಪ್ರಕರಣಗಳಿಂದ ಖುಲಾಸೆಗೊಳಿಸಲಾಗಿದೆ. ಒಬ್ಬ ಬಾಲಾಪರಾಧಿಯ ಪ್ರಕರಣ ಇನ್ನೂ ಬಾಲಾಪರಾಧಿ ನ್ಯಾಯ ಮಂಡಳಿಯಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.