ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಗಾಗಿ ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ ಸುಪ್ರೀಮ್ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಎಲ್ಲಾ ಒಂಬತ್ತು ಹೆಸರುಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡ ಈ ಹೆಸರುಗಳನ್ನು ಅಂತಿಮ ಅಂಕಿತಕ್ಕಾಗಿ ರಾಷ್ಟ್ರಪತಿ ಕಚೇರಿಗೆ ಕಳುಹಿಸಲಾಗಿದೆ.
ಕಳೆದ ವಾರ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎ.ಎಮ್ ಖಾನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾಮ್ ಅವರನ್ನೊಳಗೊಂಡ ಕೊಲಿಜಿಯಂ ಪೀಠವು ಒಂಬತ್ತು ನ್ಯಾಯಾಧೀಶರ ಹೆಸರನ್ನು ಸುಪ್ರೀಮ್ ಕೋರ್ಟ್ ನ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು. ಈ ಮೂಲಕ ಎಂಟು ಹೈಕೋರ್ಟ್ ನ್ಯಾಯಾಧೀಶರು ಮತ್ತು ಹಿರಿಯ ವಕೀಲರೊಬ್ಬರು ಸರ್ವೋಚ್ಚ ನ್ಯಾಯಾಲಯದ ಹುದ್ದೆಗೇರಲಿದ್ದಾರೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಬಿ.ವಿ ನಾಗರತ್ನ, ತೆಲಂಗಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ಕೊಲಿಜಿಯಮ್ ನಿಂದ ಶಿಫಾರಸುಗೊಂಡ ಮಹಿಳಾ ನ್ಯಾಯಾಧೀಶರಾಗಿದ್ದಾರೆ. ಈ ಮೂಲಕ ಈ ಮೂವರು ಸುಪ್ರೀಮ್ ಕೋರ್ಟ್ ಗೆ ಆಯ್ಕೆಯಾದ ಪ್ರಥಮ ನ್ಯಾಯಮೂರ್ತಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಿರಿಯ ವಕೀಲರಾದ ಪಿ.ಎಸ್ ನರಸಿಂಹ, ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಮಹೇಶ್ವರಿ, ನ್ಯಾಯಮೂರ್ತಿ ಸಿ.ಟಿ ರವಿಕುಮಾರ್, ನ್ಯಾಯಮೂರ್ತಿ ಎಮ್.ಎಮ್. ಸುಂದ್ರೇಶ್ ಅವರ ತಂಡ ಕೊಲಿಜಿಯಮ್ ನಿಂದ ಶಿಫಾರಸುಗೊಂಡ ಇತರ ನ್ಯಾಯಾಧೀಶರಾಗಿದ್ದಾರೆ.
ಒಂಬತ್ತು ನ್ಯಾಯಾಧೀಶರನ್ನು ಕೊಲಿಜಿಯಂನಿಂದ ಶಿಫಾರಸು ಮಾಡಿರುವುದು ಬಹುಶಃ ಇದೇ ಮೊದಲು. ಕೇಂದ್ರ ಸರ್ಕಾರ ಎಲ್ಲಾ ಹೆಸರುಗಳನ್ನು ಅನುಮೋದಿಸಿ ಅಂತಿಮ ಅಂಕಿತಕ್ಕಾಗಿ ರಾಷ್ಟ್ರಪತಿ ಕಚೇರಿಗೆ ಕಳುಹಿಸಿದೆ.