ದೆಹಲಿಯ ಲೋಧಿ ರಸ್ತೆಯಲ್ಲಿರುವ ಲಾಲ್ ಮಸ್ಜಿದನ್ನು ಕೆಡವಲು ಕೇಂದ್ರ ಪಡೆ ಮುಂದಾಗಿದೆ. ಮಸೀದಿಯನ್ನು ಖಾಲಿ ಮಾಡುವಂತೆ ಪೊಲೀಸರು ಇಮಾಮ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸ್ವಾತಂತ್ರ್ಯಾ ಪೂರ್ವದಿಂದಲೇ ಮುಸ್ಲಿಮರು ಆರಾಧನೆ ನಡೆಸುತ್ತಾ ಬಂದಿರುವ ಮಸೀದಿಯನ್ನು ಕೆಡವಿ ವಕ್ಫ್ ಭೂಮಿಯನ್ನು ಅತಿಕ್ರಮಣ ಮಾಡುವ ಮೂಲಕ ಅರೆಸೈನಿಕ ಪಡೆ ಕಚೇರಿಗಳು ಮತ್ತು ಬ್ಯಾರಕ್‌ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ದೆಹಲಿ ವಕ್ಫ್ ಮಂಡಳಿ ಹೇಳಿದೆ. ನಿಜಾಮುದ್ದೀನ್ ಮತ್ತು ಲೋಧಿ ರಸ್ತೆ ಪೊಲೀಸ್ ಠಾಣೆಗಳ ಎಸ್‌ಎಚ್‌ಒಗಳು ಲಾಲ್ ಮಸ್ಜಿದ್ ನ ಇಮಾಮರನ್ನು ಸಂಪರ್ಕಿಸಿ ಮಸೀದಿಯನ್ನು ಖಾಲಿ ಮಾಡುವಂತೆ ಕೇಳಿಕೊಂಡಿದ್ದಾರೆ.
ಮಾಹಿತಿ ಲಭಿಸಿ ಲಾಲ್ ಮಸ್ಜಿದ್ ಗೆ ಭೇಟಿ ನೀಡಿದ ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್, ಪೊಲೀಸರ ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ, CRPF ನ ಈ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. CRPF ಈ ಹಿಂದೆಯೂ ಲಾಲ್ ಮಸ್ಜಿದನ್ನು ಧ್ವಂಸಗೊಳಿಸಲು ಪ್ರಯತ್ನಿಸಿತ್ತು ಎಂದು ಅಮಾನತುಲ್ಲಾ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೀದಿಗಳನ್ನು ಧ್ವಂಸಗೊಳಿಸುವುದು ಮತ್ತು ಸಮಾಧಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಕೈಬಿಡುವಂತೆ ಅಮಾನತುಲ್ಲಾ ಖಾನ್ ಲೆಫ್ಟಿನೆಂಟ್ ಗವರ್ನರ್ ಅವರನ್ನು ಕೇಳಿಕೊಂಡಿದ್ದಾರೆ.