ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಬಳಿಕ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರದೇಶಗಳು ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾದವು. ಗಲಭೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆಯಾದರೂ, ಎಂದಿನಂತೆ ಎಸ್.ಡಿ.ಪಿ.ಐನ ತೇಜೋವಧೆ ಈ ಗಲಭೆಯ ಸಂದರ್ಭದಲ್ಲೂ ಮುಂದುವರಿದಿದೆ.
ಬೆಂಗಳೂರಿನಲ್ಲಿ ಎಸ್.ಡಿ.ಪಿ.ಐನ ಮೂರು ಕಚೇರಿಗಳ ಮೇಲೆ ಮಂಗಳವಾರ ಏಕಕಾಲದಲ್ಲಿ ಸಿಸಿಬಿ ದಾಳಿ ನಡೆದಿದ್ದು, ಗಲಭೆ ಪ್ರಕರಣದ ಆರೋಪಿಗಳ ಪ್ರಾಥಮಿಕ ಮಾಹಿತಿ ಅನ್ವಯ ಕಚೇರಿಗಳ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಎಸ್.ಡಿ.ಪಿ.ಐ ಮುಖಂಡ ಮುಝಮ್ಮಿಲ್ ಪಾಶರನ್ನು ವಶಕ್ಕೆ ಪಡೆದು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಮುಝಮ್ಮಿಲ್ ಪಾಶ ಘಟನೆಯ ಪ್ರಾರಂಭದಿಂದಲೇ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸೇರಿ ಶಕ್ತಿಮೀರಿ ಪ್ರಯತ್ನಿಸಿದ್ದ ವಿಚಾರ ರಾಷ್ಟ್ರದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಆದರೆ ಮುಝಮ್ಮಿಲ್ ಪಾಶ ಕರಾಳ ಕಾನೂನಿನಡಿಯಲ್ಲಿ ಈಗಲೂ ಬಂಧನದಲ್ಲಿದ್ದಾರೆ.
ಘಟನೆಯ ಪ್ರಾರಂಭದಿಂದಲೇ ಎಸ್.ಡಿ.ಪಿ.ಐಯನ್ನು ಗುರಿಪಡಿಸಲಾಗಿದೆ ಅನ್ನುವುದಕ್ಕೆ ಮತ್ತೊಂದು ಬಲವಾದ ನಿದರ್ಶನ ಲಭ್ಯವಿದೆ. ಘಟನೆಯ ದಿನದಂದು ಎಸ್.ಡಿ.ಪಿ.ಐ ಕಚೇರಿಯಲ್ಲಿದ್ದ ಹತ್ತು ಮಂದಿ ಕಾರ್ಯಕರ್ತರನ್ನು ಮಾರಕ ಅಸ್ತ್ರಗಳೊಂದಿಗೆ ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಮಾಧ್ಯಮಗಳ ಮೂಲಕ ಕಾಡ್ಗಿಚ್ಚಿನಂತೆ ಹರಡಲಾಯಿತು. ಆದರೆ ಎಸ್.ಡಿ.ಪಿ.ಐ ಕಚೇರಿಯ ಮೇಲಂತಸ್ತಿನಲ್ಲಿದ್ದ ಬಂಧಿತರೆಲ್ಲರೂ ಬಡಗಿ ಕೆಲಸ ಮಾಡುತ್ತಿದ್ದ ಬಿಹಾರದ ವಲಸೆ ಕಾರ್ಮಿಕರಾಗಿದ್ದರು ಮತ್ತು ಅವರ ಬಳಿ ಇದ್ದ ವಸ್ತುಗಳು ಅವರ ಕೆಲಸದ ಪರಿಕರಗಳಾಗಿದ್ದವು ಎಂಬ ವಾಸ್ತವ ಆ ನಂತರ ಬಹಿರಂಗವಾಯಿತು. ಸುದ್ದಿ ನಿರ್ಮಾತೃಗಳಿಗೆ ತೀವ್ರ ಮುಖಭಂಗ ಉಂಟು ಮಾಡಿದ ಈ ಸುದ್ದಿ, ಬಳಿಕ ಚರ್ಚೆಯ ಮುನ್ನೆಲೆಗೆ ಬರಲಿಲ್ಲ. ಆದರೆ ಈ ಹಿಂಸಾಚಾರ ಪ್ರಕರಣದ ಜೊತೆಗೆ ಎಸ್.ಡಿ.ಪಿ.ಐಯ ತೇಜೋವಧೆಗೆ ವೇದಿಕೆ ಸಿದ್ಧವಾಗಿದೆ ಎಂಬ ವಿಚಾರವಂತೂ ಬಹಳ ಸ್ಪಷ್ಟವಾಗಿತ್ತು.
ಘಟನೆಯ ಹಿಂದೆ ಪಕ್ಷಗಳ ರಾಜಕೀಯ ಹಿತಾಸಕ್ತಿ, ಗಾಂಜಾದ ನಂಟು ಇರುವುದು ಬಹು ಚರ್ಚಿತ ವಿಷಯ. ಈ ನಡುವೆ ಘಟನೆಯ ದಿನ ಪರಿಸ್ಥಿತಿ ನಿಯಂತ್ರಿಸುವಲ್ಲಿ ಆಡಳಿತದ ವೈಫಲ್ಯ ಮತ್ತು ಪೊಲೀಸರ ನಿಷ್ಕ್ರಿಯತೆಯು ಕೂಡ ಬಯಲಾಗಿದೆ. ಗಮನಾರ್ಹವೆಂದರೆ, ಗಲಭೆಯ ರೂವಾರಿ ನವೀನ್ ಗೆ ಇಂತಹ ಒಂದು ದುಷ್ಕೃತ್ಯ ನಡೆಸಲು ಪ್ರಚೋದನೆ ನೀಡಿದವರು ಯಾರು? ಅದರ ಹಿಂದಿನ ರಾಜಕೀಯ ಷಡ್ಯಂತ್ರವೇನು ಎಂಬುದರ ಕುರಿತು ತನಿಖೆ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಈ ವರೆಗೂ ಲಭ್ಯವಾಗಿಲ್ಲ. ಇದೀಗ ಎಸ್.ಡಿ.ಪಿ.ಐನ ತೇಜೋವಧೆಯ ಮೂಲಕ ಗಲಭೆಯ ಹಿಂದಿನ ಕಾಣದ ಕೈಗಳನ್ನು ರಕ್ಷಿಸುವ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದೆಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಪ್ರತಿಕ್ರಿಯೆ
ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, “ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಪ್ರಕರಣಗಳಲ್ಲಿ ಎಸ್.ಡಿ.ಪಿ.ಐನ ಯಾವುದೇ ಪಾತ್ರವಿಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ನಮ್ಮನ್ನು ಗುರಿಪಡಿಸಲಾಗುತ್ತಿದೆ. ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರಾದರೂ, ಅವರಿಗೆ ಯಾವುದೇ ಆಧಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ, ಪಕ್ಷದ ಬೆಳವಣಿಗೆ ಸಹಿಸದ ರಾಜ್ಯ ಸರಕಾರವು ಈ ರೀತಿಯ ದಾಳಿಗೆ ಕುಮ್ಮಕ್ಕು ನೀಡುತ್ತಿದೆ” ಎಂದೂ ಅವರು ದೂರಿದ್ದಾರೆ.