Home ಟಾಪ್ ಸುದ್ದಿಗಳು ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ತೆರಳಿದ್ದ ಪೊಲೀಸರು!

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ತೆರಳಿದ್ದ ಪೊಲೀಸರು!

ಬೆಂಗಳೂರು: ಚೈತ್ರಾ ವಂಚನೆ ಪ್ರಕರಣದ ಎ3 ಆರೋಪಿ ಹಾಲಶ್ರೀ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ.

 ಹಾಲಶ್ರೀ ಬಂಧನಕ್ಕೆ ತೆರಳಿದ್ದ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಲು ರೋಚಕವಾಗಿತ್ತು. ಎಂಟು ದಿನಗಳಿಂದ ತಲೆಮರೆಸಿಕೊಂಡಿದ್ದ ಹಾಲಶ್ರೀ ಹೈದರಾಬಾದ್ ಕಡೆಯಿಂದ ಉತ್ತರ ಭಾರತದ ಕಡೆ ಹೋಗಿರುವ ಮಾಹಿತಿ ಸಿಕ್ಕಿತ್ತು.

ಹಾಲಶ್ರೀ ಮಠಗಳು, ದೇವಸ್ಥಾನಗಳಲ್ಲಿ ಇರಬಹುದೆಂಬ ಮಾಹಿತಿ ಆಧಾರದಲ್ಲಿ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿದ್ದರು. ಶೃಂಗೇರಿ ದೇವಸ್ಥಾನದ ಅರ್ಚಕರ ರೀತಿ ಮಡಿಬಟ್ಟೆ ಧರಿಸಿ ತೆರಳಿದ್ದ ಅವರು, ಪ್ರತಿಯೊಂದು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ನಾಟಕವಾಡಿದ್ದರು.  

ಒಂದೊಂದೇ ಮಠ, ದೇವಸ್ಥಾನ ಮುಗಿಸಿ ಒಡಿಶಾದ ಪೂರಿ ಜಗನ್ನಾಥ್ ದೇವಸ್ಥಾನಕ್ಕೆ ಪೊಲೀಸರು ಹೋಗಿದ್ದರು. ಈ ವೇಳೆ ಪೂರಿ ಜಗನ್ನಾಥ್ ದೇವಸ್ಥಾನದಲ್ಲಿ ಹಾಲಶ್ರೀ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಾವು ಶೃಂಗೇರಿಯಿಂದ ಬಂದಿದ್ದೀವಿ, ಗಣೇಶ ಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಬೇಕು ಅಂತ ಹೇಳಿ ದೇವಸ್ಥಾನ ಪ್ರವೇಶಿಸಿದ್ದರು.

ಇದನ್ನು ಅರಿತ ಹಾಲಶ್ರೀ ತಕ್ಷಣ ದೇವಸ್ಥಾನ ತೊರೆದು ಒಡಿಸ್ಸಾದ ಭುವನೇಶ್ವರದಿಂದ ಬಿಹಾರದ ಭೋದ್ಗಯ್‍ಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಭುವನೇಶ್ವರ ರೈಲ್ವೆ ನಿಲ್ದಾಣಕ್ಕೆ ಪೊಲೀಸರು ಬರಬಹುದೆಂದು ಶಂಕಿಸಿ ಅಲ್ಲಿಂದ 25 ಕಿ.ಮೀ. ಇರುವ ಕಟಕ್ ರೈಲ್ವೆ ನಿಲ್ದಾಣಕ್ಕೆ ಬಸ್‍ನಲ್ಲಿ ಪಯಾಣಿಸಿದ್ದರು. ಅಷ್ಟೊತ್ತಿಗೆ ಕಟಕ್ ರೈಲ್ವೆ ನಿಲ್ದಾಣದ ಪೊಲೀಸರಿಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕಟಕ್ ರೈಲ್ವೆ ನಿಲ್ದಾಣಕ್ಕೆ ಹಾಲಶ್ರೀ ಬರುತ್ತಿದ್ದಂತೆಯೇ ಒಡಿಸ್ಸಾ ಪೊಲೀಸರು ಬಂಧಿಸಿದ್ದಾರೆ.

ಸ್ವಾಮೀಜಿ ಅರೆಸ್ಟ್ ಬಳಿಕ ದೊಡ್ಡವರ ಹೆಸರು ಹೊರಗೆ ಬರುತ್ತೆ ಅಂತ ಚೈತ್ರಾ ಹೇಳಿದ್ದಳು. ಇದೀಗ ಸಿಸಿಬಿ ಪೊಲೀಸರು ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಇನ್ನಷ್ಟು ದೊಡ್ಡವರ ಹೆಸರುಗಳು ಬರುತ್ತಾ ಎಂದು ಕಾದು ನೋಡಬೇಕಾಗಿದೆ.

Join Whatsapp
Exit mobile version