Home ಟಾಪ್ ಸುದ್ದಿಗಳು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ

►ಬಿಜೆಪಿ, ಜೆಡಿಎಸ್ ಮಾಜಿ ಸಿಎಂಗಳಿಗೆ ಆಹ್ವಾನ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ರಾಜ್ಯದ ಹಲವೆಡೆ ಈ ವಿಚಾರಕ್ಕೆ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಮತ್ತೊಂದೆಡೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು ಹೊಸ ಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಕಾವೇರಿ, ಮಹದಾಯಿ, ಕಳಸಾ ಬಂಡೂರಿ ವಿಚಾರವಾಗಿ ಇಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಇಂದು ವಿಧಾನಸೌಧದಲ್ಲಿ CM ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ.

ಸರ್ವಪಕ್ಷ ಸಭೆಗೆ ಬಿಜೆಪಿಯ ಮೂವರು ಮಾಜಿ ಸಿಎಂಗಳಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್​ ಅವರು ನಿವಾಸಕ್ಕೆ ತೆರಳಿ ಮಾಜಿ ಸಿಎಂಗಳಾದ ಬಿಎಸ್​​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದು ದೂರವಾಣಿ ಕರೆ ಮೂಲಕ ಡಿ.ವಿ.ಸದಾನಂದಗೌಡಗೆ ಸಭೆಗೆ ಆಹ್ವಾನಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳರನ್ನೂ ಸಭೆಗೆ ಕರೆಯಲಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ, ಪ್ರತಿಭಟನೆಗೆ ಕಾರಣವಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಕಾರಣ ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದರಿಂದ ರಾಜ್ಯಕ್ಕೆ ನೀರಿನ ಸಮಸ್ಯೆಯ ಭೀತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು ಸೂಕ್ತವಲ್ಲ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯದ ಕೆಲವು ಕಡೆ ಬಿಜೆಪಿ, ರೈತರು ಈ ವಿಚಾರವಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಸಭೆ ಸಂಬಂಧ ಟ್ವೀಟ್ ಮಾಡಿದ್ದು ಬುಧವಾರ ಸಭೆ ಕರೆಯಲಾಗಿದೆ, ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರಂತೆ ಹೋಗುತ್ತೀವಿ. ಸರ್ವಪಕ್ಷ ನಿಯೋಗ ಹೋಗಲು ಸೂಚಿಸಿದರೆ ಅದಕ್ಕೂ ಸಿದ್ಧ ಎಂದಿದ್ದಾರೆ.

Join Whatsapp
Exit mobile version