ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಉದ್ಯಮಿ ಹಾಗೂ ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ವಿಜಯ್ ಟಾಟಾ ಎಂಬುವರು ದೂರು ನೀಡಿದ್ದರು.
ಈ ದೂರಿನ ಅನ್ವಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಜಯ್ ಟಾಟಾ ನೀಡಿದ ದೂರಿನಲ್ಲಿ ಏನಿತ್ತು?
ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಟಿಕೆಟ್ ಫಿಕ್ಸ್ ಆಗಿದೆ.
ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು 50 ಕೋಟಿ ರೂ. ಹೊಂದಿಸಿಕೊಡಬೇಕು. ಹಣ ಹೊಂದಿಸಿ ಕೊಡದಿದ್ದರೆ ನಾನು ಏನು ಮಾಡುತ್ತೇನೋ ಗೊತ್ತಿಲ್ಲ. ನೀನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ. ನೀನು ಇಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ.
ಕುಮಾರಸ್ವಾಮಿ ಮತ್ತು ರಮೇಶ್ ಗೌಡ ನನ್ನ ವಿರುದ್ಧ ಷಡ್ಯಂತ್ರ ಮಾಡಿ 50 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಿ ಹೆಚ್ ಡಿ ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.