Home ಟಾಪ್ ಸುದ್ದಿಗಳು ಜಾನುವಾರು ಕಳ್ಳ ಸಾಗಣೆ ಪ್ರಕರಣ: ಇ.ಡಿ.ವಿಚಾರಣೆಗೆ ಹಾಜರಾದ ಸುಕನ್ಯಾ ಮೊಂಡಲ್

ಜಾನುವಾರು ಕಳ್ಳ ಸಾಗಣೆ ಪ್ರಕರಣ: ಇ.ಡಿ.ವಿಚಾರಣೆಗೆ ಹಾಜರಾದ ಸುಕನ್ಯಾ ಮೊಂಡಲ್

ಕೋಲ್ಕತ್ತಾ: ಜಾನುವಾರು ಕಳ್ಳ ಸಾಗಣೆ ಪ್ರಕರಣ ಸಂಬಂಧ ಇ.ಡಿ. ವಿಚಾರಣೆಗಾಗಿ ತೃಣಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕ ಅನುಬ್ರತ ಮೊಂಡಲ್ ಅವರ ಪುತ್ರಿ ಸುಕನ್ಯಾ ಮೊಂಡಲ್ ಬುಧವಾರ ದಿಲ್ಲಿಯ ಇಡಿ- ಜಾರಿ ನಿರ್ದೇಶನಾಲಯದ ಕಚೇರಿಗೆ ಬುಧವಾರ ಹಾಜರಾದರು.

ಈ ಮೊಕದ್ದಮೆಯಲ್ಲಿ ಕೇಂದ್ರೀಯ ತನಿಖಾ ದಳ ಹಿಂದೆ ಸೂಚಿಸಿದ ದಿನದಲ್ಲಿ ಹಾಜರಾಗಲು ಸುಕನ್ಯಾ ಮೊಂಡಲ್ ವಿಫಲರಾಗಿದ್ದರು. ಕೆಲವು ವೈಯಕ್ತಿಕ ಕಾರಣಗಳಿಗಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ, ಸ್ವಲ್ಪ ಕಾಲಾವಕಾಶಬೇಕು ಎಂದು ಆಗ ಅವರು ಇ.ಡಿ. ಗೆ ಮನವಿ ಮಾಡಿದ್ದರು.

ಸುಕನ್ಯಾ ಮೊಂಡಲ್ ಅವರು ಎಎನ್ಎಂ ಆಗ್ರೋ ಕೆಮ್ ಮತ್ತು ನೀರ್ ಡೆವಲಪರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನಿರ್ದೇಶಕಿ ಆಗಿದ್ದಾರೆ. ಎರಡೂ ಕಂಪೆನಿಗಳು ಇಡಿ ಮತ್ತು ಸಿಬಿಐ ಹದ್ದಿನ ಕಣ್ಣಿನ ಪರೀಕ್ಷೆಗೆ ಬಿದ್ದಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಇವರ ಅಕ್ಕಿ ಮಿಲ್ಲಿನಲ್ಲಿ ಜಾನುವಾರು ಕಳ್ಳ ಸಾಗಣೆ ನಡೆದಿದೆ ಎನ್ನುವ ಬಗ್ಗೆ ತನಿಖೆ ನಡೆಸುತ್ತಿವೆ.

ಮೇಲಿನೆರಡು ಕಂಪೆನಿಗಳಲ್ಲಿ ಸುಕನ್ಯಾ ಮೊಂಡಲ್ ಮತ್ತಿನ್ನೊಬ್ಬರು ನಿರ್ದೇಶಕರಾಗಿದ್ದಾರೆ. ಈ ಎರಡು ಕಾರ್ಪೊರೇಟ್ ಕಂಪೆನಿಗಳು ಜಾನುವಾರು ಕಳ್ಳ ಸಾಗಣೆಯ ಅಪರಾಧದಲ್ಲಿ ತೊಡಗಿವೆ ಎನ್ನುವುದು ಇಡಿ ಮತ್ತು ಸಿಬಿಐ ವಾದ. 2013- 14ರಲ್ಲಿ ವರ್ಷಕ್ಕೆ  ರೂ. 3.10 ಲಕ್ಷ ಇದ್ದ ಸುಕನ್ಯಾ ಮೊಂಡಲ್ ರ ಆದಾಯವು 2020- 21ರಲ್ಲಿ ರೂ. 1.45 ಕೋಟಿಗೆ ಏರಿಕೆಯಾಗಿದೆ ಎನ್ನಲಾಗಿದೆ.

ಅದಲ್ಲದೆ ಸುಕನ್ಯಾರು ರೂ. 3 ಕೋಟಿ ಠೇವಣಿ ಇಟ್ಟಿದ್ದಾರೆ. ಅಲ್ಲದೆ ಕೆಲವು ಆಸ್ತಿಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಕೊಂಡಿರುವ ಸುಕನ್ಯಾರು ಅದನ್ನು ಭಾರೀ ಬೆಲೆಗೆ ಮಾರಿದ್ದಾರೆ. ಈ ಬಗೆಗೂ ವಿಚಾರಣೆ ನಡೆಸಲು ಇಡಿ ತುದಿಗಾಲಲ್ಲಿ ನಿಂತಿದೆ.

ಸುಕನ್ಯಾರ ತಂದೆ ಅನುಬ್ರತ ಮೊಂಡಲ್ ರನ್ನು ಲೆಕ್ಕ ಮೀರಿದ ಆಸ್ತಿ ಆರೋಪದಲ್ಲಿ ಬಂಧಿಸಲಾಗಿದ್ದು, ಅವರು ಇನ್ನೂ ಜೈಲಿನಲ್ಲಿ ಇದ್ದಾರೆ. ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆತ್ಮೀಯರಾಗಿದ್ದಾರೆ. ಇದೆಲ್ಲ ಟಿಎಂಸಿ ವಿರುದ್ಧ ಕೇಂದ್ರ ನಡೆಸಿರುವ ಸೇಡಿನ ರಾಜಕೀಯ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

Join Whatsapp
Exit mobile version