Home ಅಂಕಣಗಳು ಬ್ರಾಹ್ಮಣ್ಯ ಕುರಿತ ನಟ ಚೇತನ್ ವಿರುದ್ಧ ದೂರು ಅವಿವೇಕದ ಪರಮಾವಧಿ

ಬ್ರಾಹ್ಮಣ್ಯ ಕುರಿತ ನಟ ಚೇತನ್ ವಿರುದ್ಧ ದೂರು ಅವಿವೇಕದ ಪರಮಾವಧಿ

ಒಂದು ಧಾರ್ಮಿಕ ವ್ಯವಸ್ಥೆಯಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿ ಅದನ್ನು ಮೌಲ್ಯಮುಖಿ, ಜನಮುಖಿ ಮತ್ತು ಪ್ರಗತಿಶೀಲ ಧರ್ಮವನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಹೊಂದಿದ್ದಾರೆ. ಧರ್ಮವು ಜನರನ್ನು ಬೆಳಕು, ಪರಿವರ್ತನೆ ಮತ್ತು ಪ್ರಗತಿಯೆಡೆಗೆ ಕೊಂಡೊಯ್ಯುವ ಬಹುದೊಡ್ಡ ಸಂಸ್ಥೆಯಾಗಿದೆ. ಧರ್ಮದ ನೆಲೆಗಟ್ಟು ಶಿಕ್ಷಣ, ರಾಜಕಾರಣ, ಆರ್ಥಿಕತೆ, ಅಭಿವೃದ್ಧಿ, ಮಾಧ್ಯಮ ಮೊದಲಾದ ಕ್ಷೇತ್ರಗಳಿಗೆ ಅತ್ಯವಶ್ಯಕ. ಬ್ರಾಹ್ಮಣರು ಹುಟ್ಟಿನಿಂದ ಶ್ರೇಷ್ಟರೂ ಅಲ್ಲ, ಕನಿಷ್ಠರೂ ಅಲ್ಲ. ಆದರೆ ಬ್ರಾಹ್ಮಣರೇ ಶ್ರೇಷ್ಟ ಮತ್ತು ಶೂದ್ರರು ಬ್ರಾಹ್ಮಣರ ಸೇವೆಗಾಗಿಯೇ ಹುಟ್ಟಿದವರು ಎಂಬ ಭ್ರಮೆಯನ್ನು ಬಿತ್ತಿ ಸಮಾಜದಲ್ಲಿ ಅಸಮಾನತೆಗೆ ಕಾರಣವಾಗಿರುವ ‘ಬ್ರಾಹ್ಮಣ್ಯ’ ಎಂಬ ಪಿಡುಗಿನ ವಿರುದ್ಧ ಚಾರ್ವಾಕರಿಂದ ಹಿಡಿದು ಕುವೆಂಪುವರೆಗೆ ಅನೇಕ ದಾರ್ಶನಿಕರು ಭಾರತದಲ್ಲಿ ದಿಟ್ಟ ಹೋರಾಟ ನಡೆಸಿದ್ದಾರೆ.

ಮೂಲನಿವಾಸಿಗಳ ಬದುಕುವ ಹಕ್ಕನ್ನು ಕಸಿಯುವ ಬ್ರಾಹ್ಮಣ್ಯದ ವಿರುದ್ಧ ತಮಿಳುನಾಡಿನಲ್ಲಿ ಪೆರಿಯಾರ್ ನಡೆಸಿದ ಹೋರಾಟ ಐತಿಹಾಸಿಕವಾದುದು. ಇತ್ತೀಚೆಗೆ ಕನ್ನಡ ಚಲನಚಿತ್ರರಂಗದ ಪ್ರತಿಭಾವಂತ ನಟ, ಪ್ರಗತಿಶೀಲ ಚಿಂತಕ ಮತ್ತು ಜನಪರ ಹೋರಾಟಗಳ ಮುಂಚೂಣಿಯಲ್ಲಿರುವ ನಟ ಚೇತನ್ ಬ್ರಾಹ್ಮಣ್ಯದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಸಾಂವಿಧಾನಿಕ ಆಶಯಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗೆ ಪೂರಕವಾಗಿವೆ. ಇವರ ವಿರುದ್ಧ ಕೆಲವು ಹಿಂದೂ ಮೂಲಭೂತವಾದಿಗಳು ಬೆಂಗಳೂರಿನಲ್ಲಿ ಎರಡು ದೂರುಗಳನ್ನು ಸಲ್ಲಿಸಿ ಎಫ್ಐಆರ್ ದಾಖಲಿಸಿರುವುದು ನಿಜಕ್ಕೂ ಅವಿವೇಕದ ಪರಮಾವಧಿಯಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸುವ ಕುತಂತ್ರವೇ ಆಗಿದೆ. ಇದರ ಬಗ್ಗೆ ಈಗಾಗಲೇ ನಾಡಿನ ಪ್ರಗತಿಪರ ಚಿಂತಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಚೇತನ್ಗೆ ನೈತಿಕ ಬೆಂಬಲ ವ್ಯಕ್ತಪಡಿಸಿರುವುದು ಸರಿಯಾಗಿದೆ.

ಬ್ರಾಹ್ಮಣರು ನಮ್ಮವರು ಆದರೆ ಬ್ರಾಹ್ಮಣ್ಯವೆಂಬ ವ್ಯಾಧಿ ಹಿಂದೂ ಧರ್ಮವನ್ನಷ್ಟೇ ಅಲ್ಲ ಭಾರತ ದೇಶವನ್ನೇ ನಾಶಪಡಿಸಬಾರದೆಂಬ ಸದಾಶಯ ನಮ್ಮದಾಗಿದೆ. ಚೇತನ್ಗೆ ಪ್ರಗತಿಪರ ಚಿಂತಕರು ಮತ್ತು ಸಂಘಟನೆಗಳು ಅಖಂಡ ಬೆಂಬಲ ನೀಡಿ ಬ್ರಾಹ್ಮಣ್ಯದ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ನಡೆಸುವುದು ಇಂದು ಅನಿವಾರ್ಯವಾಗಿದೆ.

Join Whatsapp
Exit mobile version