ಮಂಗಳೂರು: ಅಲ್ಪಸಂಖ್ಯಾತ ಇಲಾಖೆಯಲ್ಲಿ ಪ್ರತೀ ವರ್ಷ ಪೋಸ್ಟ್ ಮೆಟ್ರಿಕ್, ಪ್ರಿ ಮೆಟ್ರಿಕ್, ಅರಿವು ಸಾಲ ಯೋಜನೆಯಡಿಯಲ್ಲಿ ನೀಡಲಾಗುವ ಸ್ಕಾಲರ್ ಶಿಪ್ ವಿತರಣೆಯಲ್ಲಾಗುತ್ತಿರುವ ಅವ್ಯವಸ್ಥೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಮಂಗಳೂರಿನ ಅಲ್ಪಸಂಖ್ಯಾತ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ವಿದ್ಯಾರ್ಥಿಗಳು ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದು ಈ ಸಂದರ್ಭದಲ್ಲಿ ಪೊಲೀಸರು ತಡೆದಿದ್ದಾರೆ.
ಈ ಯೋಜನೆಗಳಡಿಯಲ್ಲಿ ಸ್ಕಾಲರ್ಶಿಪ್ ಸರಿಯಾಗಿ ವಿದ್ಯಾರ್ಥಿಗಳ ಕೈಗೆ ಸಿಗುತ್ತಿಲ್ಲ. ಶೇ.50 ರಷ್ಟು ಅರ್ಜಿಗಳಲ್ಲಿ ಇನ್ನೂ ಕೂಡ ಹಣ ವರ್ಗಾವಣೆಯಾಗಿಲ್ಲ. ಪ್ರತೀ ವರ್ಷ ಇದು ಪುನರಾವರ್ತನೆಯಾಗುತ್ತಿದೆ. ಕಚೇರಿಗೆ ಹೋಗಿ ವಿಚಾರಿಸಿದರೆ ಬೇಜವಾಬ್ದಾರಿಯುತ ಉತ್ತರ ಹೇಳುತ್ತಿದ್ದಾರೆ. ಇಂದು ಬರುತ್ತದೆ, ನಾಳೆ ಬರುತ್ತದೆ, ಬ್ಯಾಂಕ್ ಸಮಸ್ಯೆ ಎಂದೆಲ್ಲಾ ಉತ್ತರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಕೊರೋನಾದಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆಯಲ್ಲಿದ್ದಾರೆ. ಶಾಲಾಕಾಲೇಜುಗಳು ಆನ್ ಲೈನ್ ತರಗತಿಯ ನೆಪದಲ್ಲಿ ಶುಲ್ಕ ಕೇಳುತ್ತಿವೆ. ಆದರೆ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಕಾಯುತ್ತಿದ್ದು ಅದು ಮಂಜೂರಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಮತ್ತು ಎಂಫೀಲ್ ವ್ಯಾಸಾಂಗ ಮಾಡುತ್ತಿರುವವರಿಗೆ ಮಾಸಿಕ 25000 ರೂಪಾಯಿ ಫೆಲೋಶಿಪ್ ಹಣ ದೊರೆಯುತ್ತಿತ್ತು. ವಾರ್ಷಿಕವಾಗಿ 10000 ರೂಪಾಯಿ ನಿರ್ವಹಣಾ ವೆಚ್ಚಕ್ಕಾಗಿ ದೊರೆಯುತ್ತಿತ್ತು. ಇವೆಲ್ಲವನ್ನೂ ಏಕಾಏಕಿ ಕಡಿತಗೊಳಿಸಲಾಗಿದೆ. ಮಾಸಿಕ 25000 ರೂಪಾಯಿ ಫೆಲೋಶಿಪ್ ಅನ್ನು 10000 ರೂಪಾಯಿಗೆ ಇಳಿಸಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳು ಹೇಳಿದ್ದಾರೆ.
ಸ್ಕಾಲರ್ ಶಿಪ್ ವಿತರಣೆಯ ಸಂದರ್ಭದಲ್ಲಿ ಪ್ರತೀ ಬಾರಿ ತಾಂತ್ರಿಕ ತೊಂದರೆಗಳು ಬರುವುದರಿಂದ ಪ್ರಕ್ರಿಯೆಯನ್ನು ಸರಳೀಕರಿಸಬೇಕು. ಬಿಡುಗಡೆಗೊಳ್ಳಲು ಬಾಕಿಯಿರುವ ಸ್ಕಾಲರ್ ಶಿಪನ್ನು ಬಿಡುಗಡೆಗೊಳಿಸಬೇಕು. ವಿಲೇವಾರಿಯಾಗದೆ ಉಳಿದಿರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿಗೊಳಿಸಬೇಕು. ಎಂಫೀಲ್ ಗೆ ಇರುವ ಫೆಲೋಶಿಪ್ ಕಡಿತಗೊಳಿಸದೆ ಯಥಾ ಸ್ಥಿತಿ ಕಾಪಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.