Home ಕರಾವಳಿ ಮಂಗಳೂರು: ವಿವಿ ಕಾರ್ಯಕ್ರಮಕ್ಕೆ RSS ಮುಖಂಡ ಕಲ್ಲಡ್ಕ ಭಟ್ ಅತಿಥಿ | ಕ್ಯಾಂಪಸ್ ಫ್ರಂಟ್ ತೀವ್ರ...

ಮಂಗಳೂರು: ವಿವಿ ಕಾರ್ಯಕ್ರಮಕ್ಕೆ RSS ಮುಖಂಡ ಕಲ್ಲಡ್ಕ ಭಟ್ ಅತಿಥಿ | ಕ್ಯಾಂಪಸ್ ಫ್ರಂಟ್ ತೀವ್ರ ವಿರೋಧ!

ಮಂಗಳೂರು: ಮಾರ್ಚ್ 30ರಂದು ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆಯ ಮಂಗಳಗಂಗೋತ್ರಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಆರ್.ಎಸ್.ಎಸ್. ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಿದ್ದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ತೀವ್ರವಾಗಿ ವಿರೋಧಿಸಿದೆ.

2021-22ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ನ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಕಲ್ಲಡ್ಕ ಪ್ರಭಾಕರ್ ಭಟ್ ಆಹ್ವಾನಿಸಿರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ನಗರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಖಂಡಿಸಿ ಟ್ವೀಟ್ ಮಾಡಿದ್ದಾರೆ.

“ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮಕ್ಕೆ ದ್ವೇಷ ಭಾಷಣವನ್ನು ನಿರಂತರವಾಗಿ ಮಾಡುತ್ತಿರುವ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೇಸು ದಾಖಲಾಗಿರುವ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಆಹ್ವಾನಿಸಿರುವುದು ಖಂಡನೀಯ” ಎಂದು ಟ್ವೀಟ್ ಮಾಡಿದ್ದು, ಜೊತೆಗೆ ಈ ನಿರ್ಧಾರವನ್ನು ಶೀಘ್ರ ಹಿಂಪಡೆಯುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ, ದಕ್ಷಿಣ ಕನ್ನಡ ಜಿಲ್ಲಾ ಡಿಸಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಟ್ವೀಟ್ ಖಾತೆಗಳಿಗೆ ಟ್ಯಾಗ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

ಕುಲಪತಿ ಭೇಟಿಯಾದ ಕ್ಯಾಂಪಸ್ ಫ್ರಂಟ್ ನಿಯೋಗ: ಈ ಕುರಿತಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿವಿ ಘಟಕವೂ ತೀವ್ರವಾಗಿ ಖಂಡಿಸಿದೆ. ಮಾತ್ರವಲ್ಲದೇ, ಮಂಗಳೂರು ವಿವಿ ಕುಲಪತಿಗಳಾದ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು ಕ್ಯಾಂಪಸ್ ಫ್ರಂಟ್ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಸವಾದ್ ಕಲ್ಲರ್ಪೆ, ಮುಕ್ತಾರ್ ಹಾಗೂ ಅಫ್ರೀದ್ ಇದ್ದರು.

Join Whatsapp
Exit mobile version