Home ಟಾಪ್ ಸುದ್ದಿಗಳು ಹರಿಯಾಣ ವಿಧಾನಸಭಾ ಚುನಾವಣೆ: ಬಿರುಸುಗೊಂಡ ಮತದಾನ

ಹರಿಯಾಣ ವಿಧಾನಸಭಾ ಚುನಾವಣೆ: ಬಿರುಸುಗೊಂಡ ಮತದಾನ

ಚಂಡೀಗಢ: ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚುನಾವಣಾ ಕಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 9.53ರಷ್ಟು ಮತದಾನವಾಗಿದೆ.


ಈ ಬಾರಿಯ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪುನಃ ತನ್ನ ತೆಕ್ಕೆಗೆ ಪಡೆಯುವ ನಿರೀಕ್ಷೆಯಲ್ಲಿದೆ. ಬಿಜೆಪಿ, ಎಎಪಿ, ಕಾಂಗ್ರೆಸ್, ಜೆಜೆಪಿ, ಐಎನ್ಎಲ್ಡಿ, ಬಿಎಸ್ಪಿ ಹಾಗೂ ಎಎಸ್ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವು ಇಂದು ಇವಿಎಂಗಳಲ್ಲಿ ಭದ್ರವಾಗಲಿದೆ.


ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ತಮ್ಮ ಮೊದಲ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ”ಈ ದೇಶದ ಯುವ ಜನತೆಯಾಗಿ ಅತ್ಯುತ್ತಮ ಅಭ್ಯರ್ಥಿಗೆ ಮತ ಚಲಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಣ್ಣ ಹೆಜ್ಜೆಗಳೂ ಮುಂದೆ ದೊಡ್ಡ ಗುರಿಗಳಿಗೆ ಮುಖ್ಯವಾಗಿವೆ. ಮೊದಲ ಬಾರಿಗೆ ಮತ ಹಾಕಿದ್ದೇನೆ” ಎಂದು ಮನು ಭಾಕರ್ ಹೇಳಿದರು.


ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಚಾರ್ಖಿ ದಾದ್ರಿಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ”ಇದು ಹರಿಯಾಣಕ್ಕೆ ದೊಡ್ಡ ಹಬ್ಬ ಮತ್ತು ರಾಜ್ಯದ ಜನರಿಗೆ ಬಹಳ ದೊಡ್ಡ ದಿನವಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡುತ್ತಿದ್ದೇನೆ. 10 ವರ್ಷಗಳ ಹಿಂದೆ ಭೂಪಿಂದರ್ ಹೂಡಾ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಕ್ರೀಡಾ ಕ್ಷೇತ್ರ ಚೆನ್ನಾಗಿತ್ತು. ಸಚಿವರಾಗುವುದು ನನ್ನ ಕೈಯಲ್ಲಿಲ್ಲ, ಹೈಕಮಾಂಡ್ ನಿರ್ಣಯ” ಎಂದು ಹೇಳಿದರು.

Join Whatsapp
Exit mobile version