ಬೆಂಗಳೂರು: ಚುನಾವಣೆಯಲ್ಲಿ ಗೆದ್ದರೆ ಲಸಿಕೆ ಕೊಡುವ ತನ್ನದೇ ಪಕ್ಷದ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ‘ಗೆಲ್ಲದಿದ್ದರೆ ಜನರನ್ನು ಸಾಯಿಸುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
“ಗೆದ್ದರೆ ಮಾತ್ರವೇ ಲಸಿಕೆ ಕೊಡ್ತೀರಾ? ಸೋತರೆ ಜನ ಸತ್ತು ಹೋಗಲಾ” ಎಂದು ಅವರು ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
“ಈ ರೀತಿಯ ಗಂಭೀರ ವಿಷಯವನ್ನು ಯಾವುದೇ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸೇರಿಸಬಾರದು” ಎಂದು ಅವರು ಟೀಕಿಸಿದರು.
ತನ್ಮಧ್ಯೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ‘ಕಾಡು ಮನುಷ್ಯ’ ಎಂದು ಕರೆದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಅವರು, “ ಸಿದ್ಧರಾಮಯ್ಯರವರಿಗೆ ಕಾಂಗ್ರೆಸ್ ನಲ್ಲಿ ಬೆಲೆಯಿಲ್ಲದಾಗಿದೆ. ಅವರಿಗೆ ಒಂದೆಡೆ ಡಿಕೆಶಿ ಕುರಿತು ಭಯವಿದೆ. ಇನ್ನೊಂದೆಡೆ ಈಶ್ವರಪ್ಪ ಎಲ್ಲಿ ಎದ್ದಾನೋ ಎಂಬ ಭಯ. ಪ್ರಸ್ತುತ ಈ ಪರಿಸ್ಥಿತಿಯಿಂದ ಬುದ್ಧಿಗೆಟ್ಟಿರುವ ಅವರು ವಿದೂಷಕನಂತೆ ವರ್ತಿಸುತ್ತಿದ್ದಾರೆ” ಎಂದರು.
“ನೀವು ಪ್ರಬುದ್ಧತೆಯ ಕುರಿತು ಸಂಧಿ ಪಾಠ ಮಾಡುತ್ತಿದ್ದವರು. ಈಗ ನೀವೇ ಪ್ರಬುದ್ಧತೆಯನ್ನು ಕಳೆದುಕೊಂಡು ವಿವೇಚನಾ ರಹಿತರಾಗಿ ವರ್ತಿಸುತ್ತಿದ್ದೀರಿ. ಕಾಡು ಮನುಷ್ಯ ಎನ್ನುವ ಮೂಲಕ ಕಾಡು ಕಾಪಾಡುವವರು, ಕನ್ನಡ ಭಾಷೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಮಾನವೆಸಗಿದ್ದೀರಿ. ನಿಮ್ಮನ್ನು ಕನ್ನಡಿಗರು ಕ್ಷಮಿಸಲಾರರು” ಎಂದು ಅವರು ಕಿಡಿಗಾರಿದರು.