ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ: ಗೂಳಿ ಸಾವು-ಹಸು ಗಂಭೀರ

Prasthutha|

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಆರಂಭವಾಗಿದೆ. ಕುಟ್ಟಂದಿ ಗ್ರಾಮದ ಅಣ್ಣೀರ ಹರಿ ಎಂಬವರಿಗೆ ಸೇರಿದ ಹಸು ಹಾಗೂ ಗೂಳಿಯ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿದ್ದು, ಪರಿಣಾಮವಾಗಿ ಗೂಳಿ ಸಾವನ್ನಪ್ಪಿದರೆ, ಹಸು ಗಂಭೀರ ಗಾಯಗೊಂಡಿದೆ.

- Advertisement -

 ಸ್ಥಳಕ್ಕೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ ಹುಲಿಯನ್ನು ಸೆರೆ ಹಿಡಿಯುವಂತೆ ಮತ್ತು ಸೂಕ್ತ ಪರಿಹಾರವನ್ನು ಕೂಡಲೇ ಒದಗಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರೈತ ಸಂಘದ ಕುಟ್ಟಂದಿ ಸಂಚಾಲಕ ಬೇರಂಡ ಕೆ.ಜಗನ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ಕೊಲ್ಲಿರ ಬೋಪಣ್ಣ, ಉಮೇಶ್ ಕೇಚಮಯ್ಯ ಮುಂದಾಳತ್ವದಲ್ಲಿ ಸ್ಥಳೀಯ ರೈತ ಮುಖಂಡರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

- Advertisement -

ಅಲ್ಲದೆ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರುಗಳು, ಜೀವನ್ಮರಣ ಸ್ಥಿತಿಯಲ್ಲಿರುವ ಹಸುವಿಗೆ ಕೂಡಲೇ ಸೂಕ್ತ ಚಿಕಿತ್ಸೆಗೆ ಒತ್ತಾಯಿಸಿದರು. ಹಾಡಹಗಲೇ ಹುಲಿಯು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದರೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದನ್ನು ಖಂಡಿಸಿ, ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು, ಇಲ್ಲದಿದ್ದರೆ ಗೂಳಿಯ ಕಳೇಬರವನ್ನು ಅರಣ್ಯ ಇಲಾಖೆಯ ಕಚೇರಿ ಮುಂದಿಟ್ಟು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ಅರಣ್ಯ ವಲಯದ ಸಿಬ್ಬಂದಿ ದಿವಾಕರ್ ಅವರು, ಹುಲಿ ಸೆರೆಗೆ ಬೋನ್ ಅಳವಡಿಸುತ್ತೇವೆ.ಪರಿಹಾರ ವಿತರಿಸಲು ಕ್ರಮವಹಿಸುತ್ತೇವೆ ಎಂದರಲ್ಲದೆ, ಹಿರಿಯ ಅಧಿಕಾರಿಗಳು ಹೈಕೋರ್ಟ್ಗೆ ತೆರಳಿರುವುದರಿಂದ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಜಾಯಿಷಿಕೆಯಿತ್ತರು.

ಇದಕ್ಕೆ ರೈತ ಮುಖಂಡರಾ ಉಮೇಶ್ ಕೇಚಮಯ್ಯ, ಬಾನಂಡ ಸ್ವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ವಿವಿಧ ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ, ಚೊಟ್ಟೆಕಾಳಪಂಡ ಮನು ಆಗಮಿಸಿ, ಸ್ಥಳಕ್ಕೆ ಕೂಡಲೇ ಆಗಮಿಸುವಂತೆ ದೂರವಾಣಿ ಮೂಲಕ ಪೊನ್ನಂಪೇಟೆ ಅರಣ್ಯ ವಲಯ ಅರಣ್ಯಾಧಿಕಾರಿ ರಾಜಪ್ಪ ಅವರನ್ನು ಒತ್ತಾಯಿಸಿದರು.

Join Whatsapp
Exit mobile version