ಭರೂಚ್: ಗುಜರಾತಿನಲ್ಲಿ ಗುಜರಿ ವಸ್ತು ವ್ಯಾಪಾರಿಯೊಬ್ಬ ತನ್ನ ಅನಧಿಕೃತ ಕಟ್ಟಡವೊಂದನ್ನು ನೆಲಸಮಗೊಳಿಸದೇ ಇರಲು ಉಪಾಯವೊಂದನ್ನು ಕಂಡುಕೊಂಡಿದ್ದು, ಕಟ್ಟಡದಲ್ಲಿ ಹೆಚ್ಚುವರಿ ಮಹಡಿ ನಿರ್ಮಿಸಿ ಅದರಲ್ಲಿ ದೇವಾಲಯ ಮಾಡಿದ್ದಲ್ಲದೆ, ಮೇಲ್ಛಾವಣಿ ದೇಗುಲದ ಹೊರಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೋಲುವ ಪ್ರತಿಮೆಗಳನ್ನು ಕಾವಲಾಗಿ ಇರಿಸಿದ್ದಾರೆ.
ಉದ್ಯಮಿ ಮೋಹನ್ ಲಾಲ್ ಗುಪ್ತಾ ರಾಮ, ಸೀತೆ ಮತ್ತು ಲಕ್ಷ್ಮಣನ, ಮೋದಿ, ಯೋಗಿ ಆದಿತ್ಯನಾಥ್ ಪ್ರತಿಮೆ ಇರಿಸಿ ತನ್ನ ಅಕ್ರಮ ಕಟ್ಟದ ಉಳಿಸಲು ನೋಡಿದ್ದಾರೆ.
ಗುಪ್ತಾ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೊಂದಿಕೆಯಾಗುವಂತೆ ಉದ್ದೇಶಿತ ಅಕ್ರಮ ಸ್ಕ್ರ್ಯಾಪ್ ಗೋಡೌನ್ ಮೇಲಿನ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಅಂಕಲೇಶ್ವರದ ಗಡ್ಖೋಲ್ ಗ್ರಾಮದ ಜನತಾನಗರ ಸೊಸೈಟಿಯ ನಿವಾಸಿ ಮನ್ಸುಖ್ ರಖಾಸಿಯಾ ಅವರ ದೂರಿನ ಮೇರೆಗೆ ಬೌಡಾ ಅಧಿಕಾರಿಗಳು ಕಟ್ಟಡವನ್ನು ಪರಿಶೀಲಿಸಿದ ನಂತರ ಸ್ಕ್ರ್ಯಾಪ್ ವ್ಯಾಪಾರಿಯ ಈ ಉಪಾಯ ಗಮನಕ್ಕೆ ಬಂದಿದೆ.
ಮೇಲ್ಛಾವಣಿ ದೇವಸ್ಥಾನದ ಬಗ್ಗೆ ದೂರುಗಳ ನಂತರ ಬೌಡಾ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಉದ್ಯಮಿ ಪೂರ್ವಾನುಮತಿ ಇಲ್ಲದೆ ಹೆಚ್ಚುವರಿ ಮಹಡಿಯನ್ನು ನಿರ್ಮಿಸಿದ್ದಾರೆ ಎಂದು ಕಂಡುಹಿಡಿದಿದ್ದಾರೆ.
ಕಟ್ಟಡದ ಅಗತ್ಯ ದಾಖಲೆಗಳು ಮತ್ತು ಇತರ ವಿವರಗಳನ್ನು ಸಲ್ಲಿಸಲು ಗುಪ್ತಾ ಅವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇಡೀ ಕಟ್ಟಡವನ್ನು ನವೀಕರಿಸಿದ್ದಲ್ಲ, ಹೊಸದಾಗಿ ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ.