Home ಟಾಪ್ ಸುದ್ದಿಗಳು ಬಿಟಿವಿ ವ್ಯವಸ್ಥಾಪಕ ನಿರ್ದೇಶಕ ಅರೆಸ್ಟ್

ಬಿಟಿವಿ ವ್ಯವಸ್ಥಾಪಕ ನಿರ್ದೇಶಕ ಅರೆಸ್ಟ್

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಜಯನಗರ ಠಾಣೆ ಪೊಲೀಸರು ಬಿಟಿವಿ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಕುಮಾರ್‌ನ್ನು ಬಂಧಿಸಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ಕುಮಾರ್ ತಲೆಮರೆಸಿಕೊಂಡಿದ್ದರು. ನೋಟಿಸ್ ಜಾರಿ ಮಾಡಿದರೂ ವಿಚಾರಣೆಗೆ ಹೋಗಿರಲಿಲ್ಲ. ಈ ಹಿನ್ನೆಲೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಶನಿವಾರ ಮನೆಯ ಬಳಿ ವಾಕಿಂಗ್‌ ಹೋಗುತ್ತಿದ್ದಾಗ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕುಮಾರ್‌ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದರಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಹೇಳಿದ್ದಾರೆ.

ಅಶ್ವಿನ್‌ ಮಹೇಂದ್ರ ಹಾಗೂ ಜಿ.ಎಂ ಕುಮಾರ್ ಇಬ್ಬರೂ ಈಗಲ್‌ಸೈಟ್ ಮಿಡಿಯಾ ಕಂಪನಿ ಆರಂಭಿಸಿ ಅದರ ನಿರ್ದೇಶಕರಾಗಿದ್ದರು. ಆದರೆ ಕುಮಾರ್ ಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸಿ ಅಶ್ವಿನ್ ಅವರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಾರೆಂದು ಕುಮಾರ್‌ ವಿರುದ್ಧ ಅಶ್ವಿನ್ ಮಹೇಂದ್ರ ಪ್ರಕರಣ ದಾಖಲಿಸಿದ್ದರು.

ಜಿ.ಎಂ. ಕುಮಾರ್ ವಿರುದ್ಧ ಐಪಿಸಿ 402 (ನಂಬಿಕೆ ದ್ರೋಹ) ಹಾಗೂ ಐಪಿಸಿ 420 (ವಂಚನೆ) ಆರೋಪದಡಿ 2022ರಲ್ಲಿ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Join Whatsapp
Exit mobile version