ಜೆರುಸಲಂ: ಪವಿತ್ರ ರಂಝಾನ್ ಪ್ರಯುಕ್ತ ಪೂರ್ವ ಜೆರುಸಲಂನ ಐತಿಹಾಸಿಕ ಅಲ್ ಅಕ್ಸಾ ಮಸೀದಿಯಲ್ಲಿ ರಾತ್ರಿಯ ನಮಾಝ್ ನಿರ್ವಹಿಸುತ್ತಿದ್ದ ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲ್ ಸೈನಿಕರು ತೀವ್ರವಾಗಿ ಲಾಠಿಯಿಂದ ಥಳಿಸಿ ಕ್ರೂರವಾಗಿ ವರ್ತಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನೂರಾರು ಪುರುಷರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ರಾತ್ರಿಯಿಡೀ ಪ್ರಾರ್ಥನೆಗಾಗಿ ಉಳಿದುಕೊಂಡಿದ್ದ ಖಿಬ್ಲಿ ಪ್ರಾರ್ಥನಾ ಸಭಾಂಗಣದ ಮೇಲೆ ನೂರಾರು ಶಸ್ತ್ರಸಜ್ಜಿತ ಇಸ್ರೇಲ್ ಸೈನಿಕರು ದಾಳಿ ನಡೆಸಿದರು. ಸ್ಟನ್ ಗ್ರೆನೇಡ್’ಗಳನ್ನು ಬಳಸಿ, ಅಶ್ರುವಾಯು ಸಿಡಿಸಿದರು. ಮಾತ್ರವಲ್ಲ ರಬ್ಬರ್ ಲೇಪಿತ ಉಕ್ಕಿನ ಗುಂಡುಗಳನ್ನು ಸಹ ಹಾರಿಸಿದ್ದಾರೆ. ಇದರಿಂದ ಹಲವು ಫೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಂತರ ಇಸ್ರೇಲಿ ಅಧಿಕಾರಿಗಳು ಪ್ರಾರ್ಥನೆನಿರತರನ್ನು ಲಾಠಿ ಮತ್ತು ಬಂದೂಕುಗಳಿಂದ ಥಳಿಸಿದ್ದು, ಹಲವರು ಗಾಯಗೊಂಡಿದ್ದಾರೆ. ನಂತರ ಅವರನ್ನು ಬಂಧಿಸಿದರು. ಅವರ ಸ್ಥಿತಿಗತಿ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಬಳಿಕ ಅವರನ್ನು ಅಲ್ಲಿಂದ ತೆರವುಗೊಳಿಸಲಾಯಿತು ಎಂದು ತಿಳಿದುಬಂದಿದೆ. ಇಸ್ರೇಲ್ ಸೈನಿಕರ ಕ್ರೌರ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.