ಶಿಲ್ಲಾಂಗ್: ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 12 ಕಾಂಗ್ರೆಸ್ ಶಾಸಕರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕ್ರಮವನ್ನು ಮೇಘಾಲಯ ಸ್ಪೀಕರ್ ಲಿಂಗ್ದೊ ಮೆತಾಬ್ ‘ನ್ಯಾಯ ಸಮ್ಮತ’ ಎಂದಿದ್ದಾರೆ
ರೆಬೆಲ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ಸ್ಪೀಕರ್ ನಿರ್ಧಾರದ ಬಳಿಕ ಮೇಘಾಲಯ ವಿಧಾನ ಸಭೆಯಲ್ಲಿ ಟಿಎಂಸಿ ಅಧಿಕೃತ ವಿಪಕ್ಷವಾಗಿ ಹೊರಹೊಮ್ಮಿದೆ.
ಕಾಂಗ್ರೆಸ್ ಮನವಿಯ ಬಳಿಕ ಎಲ್ಲಾ 12 ಶಾಸಕರಿಗೂ ನೋಟಿಸ್ ಕಳುಹಿಸಿದ್ದ ಸ್ಪೀಕರ್ ಲಿಂಗ್ದೊ ಮೆತಾಬ್ ವಿವರಣೆ ಕೇಳಿದ್ದರು. ಎಲ್ಲಾ ಶಾಕಸರು ಸ್ಪೀಕರ್’ಗೆ ವೈಯಕ್ತಿಕವಾಗಿ ಪತ್ರ ಬರೆದು ತಮ್ಮನ್ನು ಅನರ್ಹಗೊಳಿಸದಂತೆ ಮನವಿ ಮಾಡಿದ್ದರು. ಇದಾದ ಬಳಿಕ ಕಾಂಗ್ರೆಸ್ ಶಾಸಕರ ಟಿಎಂಸಿ ಸೇರ್ಪಡೆಗೆ ಸ್ಪೀಕರ್ ಅಸ್ತು ಎಂದಿದ್ದಾರೆ. ಕಾಂಗ್ರೆಸ್ ಶಾಸಕರು ಟಿಎಂಸಿ ಸೇರ್ಪಡೆಯಾಗಿರುವುದರಲ್ಲಿ ನನಗೇನೂ ತಪ್ಪು ಕಾಣಿಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸುತ್ತಿದ್ದೇನೆ ಎಂದು ಸ್ಪೀಕರ್ ಹೇಳಿದ್ದಾರೆ.
17 ಶಾಸಕರ ಪೈಕಿ 12 ಶಾಸಕರು ಪಕ್ಷಾಂತರವಾಗಿರುವದರಿಂದ ಮೇಘಾಲಯದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯಾಬಲ 5ಕ್ಕೆ ಇಳಿದಿದೆ. ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕರ ಭೇಟಿಯ ಬಳಿಕ ಕಳೆದ ನವೆಂಬರ್ 25ರಂದು ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 12 ಕಾಂಗ್ರೆಸ್ ಶಾಸಕರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.
ಮೇಘಾಲಯದಲ್ಲಿ ವಿನ್ಸೆಂಟ್ ಪಾಲಾ ಅವರನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದ ಬಳಿಕ ರಾಜ್ಯ ನಾಯಕರಲ್ಲಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಮೂಡಲಾರಂಭಿಸಿತ್ತು. ಹೀಗಾಗಿ ಶಾಸಕರು ಪಕ್ಷ ತೊರೆದಿದ್ದಾರೆ ಎಂದು ಸಂಗ್ಮಾ ಹೇಳಿದ್ದರು.
ಮೇಘಾಲಯದಲ್ಲಿ ಸದ್ಯ ನ್ಯಾಷನಲ್ ಪೀಪಲ್ಸ್ ಪಾರ್ಟಿ, ಎನ್‌ಡಿಎ ಮಿತ್ರಪಕ್ಷಗಳ ಜೊತೆಗೂಡಿ ಸರ್ಕಾರ ನಡೆಸುತ್ತಿದೆ. ಎನ್‌ಪಿಪಿಯ ಕಾನ್ರಾಡ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದಾರೆ. 60 ಸ್ಥಾನಬಲ ಹೊಂದಿರುವ ರಾಜ್ಯ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದೆ.