Home ಟಾಪ್ ಸುದ್ದಿಗಳು ಮದ್ರಸ ಶಿಕ್ಷಣದಲ್ಲಿ ಸರಕಾರದ ಹಸ್ತಕ್ಷೇಪದ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

ಮದ್ರಸ ಶಿಕ್ಷಣದಲ್ಲಿ ಸರಕಾರದ ಹಸ್ತಕ್ಷೇಪದ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

ಬೆಂಗಳೂರು: ಮದ್ರಸ ಶಿಕ್ಷಣದಲ್ಲಿ ಸರಕಾರವು ಹಸ್ತಕ್ಷೇಪ ನಡೆಸುತ್ತಿರುವುದರ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶವಿದ್ದು, ಮುಸ್ಲಿಮರ ಧಾರ್ಮಿಕ ಶಿಕ್ಷಣದಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದಿನಿಂದಲೂ ಮದ್ರಸಾಗಳು ಕಾರ್ಯನಿರ್ವಹಿಸುತ್ತಾ ಬರುತ್ತಿದ್ದು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಸಮರ್ಪಿಸುವಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಿವೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ ಅವರಿಗೆ ಜೀವನದ ಮೌಲ್ಯಗಳನ್ನು ಕಲಿಸುವ, ಅವರನ್ನು ಪ್ರಜ್ಞಾವಂತರನ್ನಾಗಿಸುವ ನಿಟ್ಟಿನಲ್ಲಿ ಮದ್ರಸಾಗಳ ಪಾಲು ಬಹಳಷ್ಟಿದೆ. ಆದರೆ ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುಧಾರಣೆ ತರುವ ನೆಪದಲ್ಲಿ ಮದ್ರಸ ಶಿಕ್ಷಣದಲ್ಲಿ ಅನಗತ್ಯ ಹಸ್ತಕ್ಷೇಪ ನೀಡುವ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.


ಮದ್ರಸಾಗಳೆಂದರೆ ಕೇವಲ ಧಾರ್ಮಿಕ ಸಂಸ್ಥೆಗಳಲ್ಲ. ರಾಜ್ಯದಲ್ಲಿರುವ ಹಲವಾರು ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಶಾಲಾ ಶಿಕ್ಷಣಕ್ಕೂ ಪ್ರೇರಣೆ ನೀಡಲಾಗುತ್ತಿದೆ. ಇನ್ನು ದಿನದಲ್ಲಿ ಒಂದೆರಡು ಗಂಟೆ ಮದ್ರಸಗಳಲ್ಲಿ ಕಲಿಯುವ ಅಸಂಖ್ಯಾತ ಮಕ್ಕಳು ದಿನವಿಡೀ ಶಾಲಾ ಶಿಕ್ಷಣದಲ್ಲಿ ತಲ್ಲೀನರಾಗಿರುತ್ತಾರೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸಗಳು ತಮಗೆ ಅನುಕೂಲಕರವಾದ ಉಪಯುಕ್ತ ಪಠ್ಯಕ್ರಮಗಳನ್ನು ಅಳವಡಿಸಿಕೊಂಡಿವೆ ಮತ್ತು ಅವು ಸಮುದಾಯದ ಸ್ವಂತ ಖರ್ಚಿನಲ್ಲಿಯೇ ಮುಂದುವರಿಯುತ್ತಿವೆ. ಖಾಸಗಿಯಾಗಿ ನಡೆಸಲ್ಪಡುವ ಮದ್ರಸಗಳೂ ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿವೆ. ಕೆಲವೊಂದು ಮದ್ರಸಗಳಿಗೆ ವಕ್ಫ್ ಸಂಸ್ಥೆಯ ಮೂಲಕ ಸಹಾಯ ಧನ ದೊರಕುತ್ತಿದ್ದರೂ, ಅದೇನೂ ತೃಪ್ತಿಕರವಾಗಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಬಿಜೆಪಿ ಸರಕಾರವು ಮದ್ರಸ ಶಿಕ್ಷಣ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಿರುವುದು, ಸಂವಿಧಾನದ ವಿಧಿ 25,29,30ರಲ್ಲಿ ಖಾತರಿಪಡಿಸಲಾದ ನಾಗರಿಕರು ಧಾರ್ಮಿಕ ಸ್ವಾತಂತ್ರ್ಯವನ್ನು ಆಚರಿಸುವ, ಅಲ್ಪಸಂಖ್ಯಾತರು ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೊದಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಎಂದು ಅವರು ಟೀಕಿಸಿದರು.


ಸುಧಾರಣೆಯ ನೆಪದಲ್ಲಿ ಮದ್ರಸ ಶಿಕ್ಷಣದಲ್ಲಿ ಮೂಗು ತೂರಿಸುವ ಬಿಜೆಪಿ ಸರಕಾರಕ್ಕೆ ಮುಸ್ಲಿಮ್ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಒಂದು ವೇಳೆ ಅದಕ್ಕೆ ನಿಜವಾದ ಕಾಳಜಿ ಇರುತ್ತಿದ್ದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ ಸ್ಕಾಲರ್ ಶಿಪ್ ಯೋಜನೆಯ ಅನುದಾನವನ್ನು ಕಡಿತಗೊಳಿಸುತ್ತಿರಲಿಲ್ಲ. ಎಂ.ಫಿಲ್ ಮತ್ತು ಇನ್ನಿತರ ಉನ್ನತ ಶಿಕ್ಷಣ ಪಡೆಯುವ ಮುಸ್ಲಿಮ್ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಡುತ್ತಿರಲಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸಮವಸ್ತ್ರದ ನಿಯಮವಿಲ್ಲದಿದ್ದರೂ, ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಾಲಾ-ಕಾಲೇಜು ಕ್ಯಾಂಪಸ್ ನಿಂದ ಅಮಾನವೀಯವಾಗಿ ಹೊರಗಟ್ಟುತ್ತಿರಲಿಲ್ಲ. ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲವೆಂದು ಹಿಜಾಬ್ ಗೆ ನಿಷೇಧ ಹೇರಿದ ಅದೇ ಸರಕಾರ ಇಂದು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿ ಧರ್ಮದ ಹೆಸರಿನಲ್ಲಿ ಮಕ್ಕಳನ್ನು ವಿಭಜನೆ ಮಾಡಲು ಹೊರಟಿದ್ದಾರೆ. ಈ ಎಲ್ಲಾ ವಿಚಾರಗಳು ಬಿಜೆಪಿ ಸರಕಾರ ಮತ್ತು ಶಿಕ್ಷಣ ಸಚಿವರ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತಿವೆ. ಮದ್ರಸ ಶಿಕ್ಷಣದಲ್ಲಿನ ಹಸ್ತಕ್ಷೇಪವು ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿಯುವ ಅರೆಸ್ಸೆಸ್ ನ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದ್ದು, ಇದನ್ನು ಬಿಜೆಪಿ ಸರಕಾರದ ಮೂಲಕ ಕಾರ್ಯರೂಪಕ್ಕೆ ತರುತ್ತಿದೆ. ಇಂತಹ ಷಡ್ಯಂತ್ರಗಳನ್ನು ಸಮುದಾಯವು ಒಂದಾಗಿ ಎದುರಿಸಬೇಕಾದ ಅಗತ್ಯವಿದೆ ಎಂದು ಅತೀಕುರ್ರಹ್ಮಾನ್ ಅಶ್ರಫಿ ಹೇಳಿದರು.


ಬಿಜೆಪಿ ಸರಕಾರವು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಧಾರ್ಮಿಕ ವಿಚಾರಗಳನ್ನು ಕೆದಕುತ್ತಾ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುತ್ತಿದೆ. ಈ ಕಾರಣಕ್ಕಾಗಿಯೇ ಅದು ಐತಿಹಾಸಿಕ ದಾಖಲೆಗಳು ದರ್ಗಾದ ಪರವಾಗಿದ್ದರೂ ಬಾಬಾ ಬುಡನ್ ಗಿರಿಯನ್ನು ಮತ್ತೇ ವಿವಾದದ ಕೇಂದ್ರ ಬಿಂದುವನ್ನಾಗಿ ಮಾಡಿದೆ. ಚಾಮರಾಜಪೇಟೆಯ ಈದ್ಗಾ ಮೈದಾನ ವಕ್ಫ್ ಆಸ್ತಿಯಾಗಿರುವ ಬಗ್ಗೆ ದಾಖಲೆ ಇದ್ದರೂ ಅದರ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ, ಬಿಜೆಪಿ ಧರ್ಮಗಳನ್ನು ವಿಭಜಿಸುವ ಮೂಲಕ ತನ್ನ ಕೋಮು ರಾಜಕಾರಣವನ್ನು ಜೀವಂತವಾಗಿಡಲು ಯೋಜನೆ ರೂಪಿಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದರು.


ಯಾವುದೇ ಕಾರಣಕ್ಕೂ ಮದ್ರಸ ಶಿಕ್ಷಣದಲ್ಲಿ ಸರಕಾರದ ಹಸ್ತಕ್ಷೇಪವನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸರಕಾರವು ಈ ರೀತಿಯ ಕೋಮು ರಾಜಕೀಯದಿಂದ ಕೂಡಲೇ ಹಿಂದೆ ಸರಿಯಬೇಕು. ಒಂದು ವೇಳೆ ಅದು ಅನ್ಯಾಯವಾಗಿ ಮಧ್ಯಪ್ರವೇಶ ನಡೆಸಿದರೆ, ರಾಜ್ಯಾದ್ಯಂತ ಮುಸ್ಲಿಮ್ ಸಮುದಾಯದ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಜಾಫರ್ ಸಾದಿಕ್ ಫೈಝಿ, ಬೆಂಗಳೂರು ಜಿಲ್ಲಾಧ್ಯಕ್ಷ ಮೌಲಾನಾ ಶಕೀಲ್ ಅಹ್ಮದ್ ಉಪಸ್ಥಿತರಿದ್ದರು.

Join Whatsapp
Exit mobile version