Home ಟಾಪ್ ಸುದ್ದಿಗಳು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು

ಬೆಂಗಳೂರು: ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ ಅಹವಾಲು ಸಲ್ಲಿಸಲು ಯತ್ನಿಸಿದ ಮಹಿಳೆಯನ್ನು ನಿಂದಿಸಿದ್ದಲ್ಲದೇ, ಆಕೆಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಮಹಿಳಾ ಆಯೋಗಕ್ಕೆ ದೂರು ನೀಡಿದೆ.


ಇದೇ ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರ ಎಎಪಿ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, “ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರ ದರ್ಪ ಮಿತಿಮೀರಿದೆ. ರಾಜಕಾಲುವೆ ಒತ್ತುವರಿ ಸಂಬಂಧ ದೂರು ನೀಡಲು ಆಗಮಿಸಿದ ಮಹಿಳೆಯನ್ನು ಲಿಂಬಾವಳಿ ನಿಂದಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸರ ಮೇಲೆ ಪ್ರಭಾವ ಮೀರಿ ಆಕೆಯ ಬಂಧನವಾಗುವಂತೆ ಮಾಡಿದ್ದಾರೆ. ಜನರ ಸಮಸ್ಯೆಯನ್ನು ಆಲಿಸುವ ಸೌಜನ್ಯವಿಲ್ಲದ ಲಿಂಬಾವಳಿಯವರು ಶಾಸಕರಾಗಿರುವುದು ಕ್ಷೇತ್ರದ ದುರಾದೃಷ್ಟ” ಎಂದು ಹೇಳಿದರು.


“ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪೊಲೀಸರು ಮಹಿಳೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಜನರ ಸಮಸ್ಯೆ ಆಲಿಸುವ ಬದಲು ಅವರ ವಿರುದ್ಧವೇ ಕ್ರಮಕೈಗೊಂಡಿರುವುದು ಖಂಡನೀಯ. ಸಂತ್ರಸ್ತ ಮಹಿಳೆ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣವನ್ನು ರದ್ದು ಪಡಿಸಬೇಕು. ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಲಿಂಬಾವಳಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಅರವಿಂದ ಲಿಂಬಾವಳಿಯವರು ಸಮಸ್ತ ಮಹಿಳೆಯರ ಕ್ಷಮೆ ಕೇಳಬೇಕು” ಎಂದು ಕುಶಲಸ್ವಾಮಿ ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರಾದ ಉಷಾ ಮೋಹನ್, ವೀಣಾ ಮಹಾಲಿಂಗಂ, ರಮ್ಯ, ಸುವರ್ಣ, ಕರಗಮ್ಮ ಮತ್ತಿತರ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

Join Whatsapp
Exit mobile version