Home ಟಾಪ್ ಸುದ್ದಿಗಳು ಪ್ರವಾದಿ ನಿಂದನೆ: ವಿದೇಶಿ ಟೀಕೆ ಬೆನ್ನಲ್ಲೇ ಪಕ್ಷದ ಪ್ಯಾನೆಲಿಸ್ಟ್ ಗಳಿಗೆ ಹೊಸ ನಿಯಮ ವಿಧಿಸಿದ ಬಿಜೆಪಿ

ಪ್ರವಾದಿ ನಿಂದನೆ: ವಿದೇಶಿ ಟೀಕೆ ಬೆನ್ನಲ್ಲೇ ಪಕ್ಷದ ಪ್ಯಾನೆಲಿಸ್ಟ್ ಗಳಿಗೆ ಹೊಸ ನಿಯಮ ವಿಧಿಸಿದ ಬಿಜೆಪಿ

ದೆಹಲಿ: ಪ್ರವಾದಿ ಮುಹಮ್ಮದ್ ನಿಂದನೆ ವಿಚಾರವಾಗಿ ಗಲ್ಫ್ ಸೇರಿದಂತೆ ಹಲವು ರಾಷ್ಟ್ರಗಳಿಂದ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಮತ್ತಷ್ಟು ಅಲರ್ಟ್ ಆಗಿದೆ. ಇದೀಗ, ತನ್ನ ಮಾಧ್ಯಮ ವಕ್ತಾರರಿಗೆ ಹೊಸ ನಿಯಮವನ್ನು ಆದೇಶಿಸಿದೆ.

ಕೇವಲ ಪಕ್ಷದ ಅಧಿಕೃತ ವಕ್ತಾರರಷ್ಟೇ ಟಿವಿ ಚರ್ಚೆಯಲ್ಲಿ ಭಾಗವಹಿಸುವಂತೆ ಹಾಗೂ ಪಕ್ಷದ ಮಾಧ್ಯಮ ವಿಭಾಗ ಸೂಚಿಸಿದವರಷ್ಟೇ ಚರ್ಚೆಯಲ್ಲಿ ಭಾಗವಹಿಸುವಂತೆ ಆದೇಶಿಸಿದೆ. ಅಲ್ಲದೇ, ಹೀಗೆ ಭಾಗವಹಿಸುವ ಯಾರೂ ಕೂಡಾ ಯಾವುದೇ ಧರ್ಮವನ್ನು ನಿಂದಿಸುವುದಾಗಲೀ, ಚರ್ಚಿಸುವುದಾಗಲೀ ನಡೆಸಕೂಡದೆಂದು ಹೈಕಮಾಂಡ್ ಎಚ್ಚರಿಸಿದ್ದಾಗಿ ಬಿಜೆಪಿ ಮೂಲಗಳು ತಿಳಿಸಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.

ಮಾಧ್ಯಮ ಚರ್ಚೆ ಸಮಯದಲ್ಲಿ ಯಾವುದೇ ಹಂತದಲ್ಲೂ ಉದ್ವೇಗಕ್ಕೆ ಒಳಗಾಗದಂತೆ ಹಾಗೂ ತನ್ನ ಪರಿಧಿಯನ್ನು ಮೀರದೆ ಸಭ್ಯ ಭಾಷೆಯನ್ನೇ ಬಳಸುವಂತೆ ಸೂಚಿಸಿದೆ. ಹಾಗೂ ಪಕ್ಷದ ತತ್ವ, ಸಿದ್ಧಾಂತಕ್ಕೆ ಕುತ್ತು ತರುವ ರೀತಿಯ ಮಾತಿಗೂ ಕಡಿವಾಣ ಹಾಕುವಂತೆ ತಿಳಿಸಿದೆ.

ಜೊತೆಗೆ, ಟಿವಿ ಡಿಬೇಟ್ ಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮೊದಲು ವಿಷಯವನ್ನು ಅರಿತುಕೊಳ್ಳುವುದು ಮತ್ತು ಆ ವಿಚಾರದ ಬಗ್ಗೆ ಅಧ್ಯಯನ ನಡೆಸಿ ಡಿಬೇಟ್ ಗಳಿಗೆ ತೆರಳುವುದು, ಚರ್ಚಾ ಸಮಯದಲ್ಲೂ ಅಜೆಂಡಾದ ಮೇಲಷ್ಟೇ ಚರ್ಚಿಸುವುದು ಸೇರಿದಂತೆ ಯಾವುದೇ ಒತ್ತಡಕ್ಕೆ ಒಳಗಾಗದಂತೆ ತನ್ನ ಮಾಧ್ಯಮ ವಕ್ತಾರರಿಗೆ ಬಿಜೆಪಿ ಎಚ್ಚರಿಸಿದೆ.

ಪ್ರವಾದಿ ಮುಹಮ್ಮದ್ ಅವರ ಕುರಿತಾಗಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಆಡಿದ್ದ ನಿಂದನಾತ್ಮಕ ಮಾತುಗಳು ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ, ಬಿಜೆಪಿ ಹೈಕಮಾಂಡ್ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ವಜಾಗೊಳಿಸಿತ್ತು.

Join Whatsapp
Exit mobile version