Home ಟಾಪ್ ಸುದ್ದಿಗಳು 20 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

20 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಇಂದಿರಾನಗರದಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ.

ಇಂದಿರಾನಗರ 2 ನೇ ಹಂತದಲ್ಲಿನ ಬಿನ್ನಮಂಗಲದ ಸರ್ವೆ ಸಂಖ್ಯೆ 13 ರ ಬಿಡಿಎಗೆ ಸೇರಿದ್ದ 11 ಗುಂಟೆ ಜಾಗದಲ್ಲಿ ಖಾಸಗಿಯವರು ಮೂರು ಶೆಡ್ ಗಳನ್ನು ಹಾಕಿಕೊಂಡು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಜಾಗವನ್ನು ತೆರವುಗೊಳಿಸಿರಲಿಲ್ಲ.

ಬದಲಾಗಿ ಒತ್ತುವರಿದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಾದರೂ, ಸುಪ್ರೀಂಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು.
ಈ ಹಿನ್ನೆಲೆಯಲ್ಲಿ ಬಿಡಿಎ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್, ರವಿಕುಮಾರ್ ಮತ್ತು ಲಕ್ಷ್ಮಯ್ಯ ಹಾಗೂ ಕಾರ್ಯಪಾಲಕ ಅಭಿಯಂತರ ಮಹದೇವಗೌಡ ನೇತೃತ್ವದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿತು.

ಈ 11 ಗುಂಟೆ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 18 ಕೋಟಿ ರೂಪಾಯಿಗಳಾಗಿದೆ.

ಇನ್ನೊಂದು ಪ್ರಕರಣದಲ್ಲಿ ಲೀಲಾ ಪ್ಯಾಲೇಸ್ ಹೊಟೇಲ್ ಹಿಂಭಾಗ ಬಿಡಿಎಗೆ ಸೇರಿದ 1600 ಚದರಡಿ ಜಾಗದಲ್ಲಿ ಹೊಟೇಲ್ ನವರು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದರು. ಇದನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಹೊಟೇಲ್ ನವರು ಕಾಂಪೌಂಡ್ ತೆರವುಗೊಳಿಸಿರಲಿಲ್ಲ.

ಜೆಸಿಬಿಗಳ ನೆರವಿನಿಂದ ಕಾಂಪೌಂಡ್ ಅನ್ನು ನೆಲಸಮಗೊಳಿಸಿ ಸದರಿ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 2 ಕೋಟಿ ರೂಪಾಯಿಗಳಾಗಿದೆ.

Join Whatsapp
Exit mobile version