Home ಟಾಪ್ ಸುದ್ದಿಗಳು ಬಿಜೆಪಿಯ ಕೋಮುವಾದದ ರಾಜಕಾರಣ ದೇಶದಲ್ಲಿ ಯಶಸ್ವಿಯಾಗಿರುವುದು ಅಪಾಯಕಾರಿ: ಸಿದ್ದರಾಮಯ್ಯ

ಬಿಜೆಪಿಯ ಕೋಮುವಾದದ ರಾಜಕಾರಣ ದೇಶದಲ್ಲಿ ಯಶಸ್ವಿಯಾಗಿರುವುದು ಅಪಾಯಕಾರಿ: ಸಿದ್ದರಾಮಯ್ಯ

ಬೆಂಗಳೂರು: ಚುನಾವಣೆಗಳ ಫಲಿತಾಂಶ ಎನ್ನುವುದು ಜನತೆಯ ಅಭಿಪ್ರಾಯವನ್ನು ಅರಿತುಕೊಳ್ಳಲು ಇರುವ ಅವಕಾಶ. ಅದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರೆಲ್ಲರೂ ಗೌರವಿಸಬೇಕು. ನಾನು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.


ಪಂಚ ರಾಜ್ಯಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ, ಈ ಹಿನ್ನಡೆಯ ಬಗ್ಗೆ ನಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ ಎಂದರು.


ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಪ್ರತಿಯೊಂದು ರಾಜ್ಯದ ರಾಜಕಾರಣ ಮತ್ತೊಂದು ರಾಜ್ಯದ ರಾಜಕಾರಣಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ ದುರ್ಬಲವಾಗಿದೆ. ಅಲ್ಲಿ ಜನತೆಯ ಬೆಂಬಲ ಇದೆ.ಆ ಬೆಂಬಲವನ್ನು ಮತಗಳನ್ನಾಗಿ ಪರಿವರ್ತಿಸುವ ಸಂಘಟನೆ ಕೊರತೆ ಇದೆ.ಅದನ್ನು ಸರಿಪಡಿಸಬೇಕು. ಕರ್ನಾಟಕದಲ್ಲಿ ನಮಗೆ ಜನರ ಬೆಂಬಲವೂ ಇದೆ.ಅದನ್ನು ಮತಗಳನ್ನಾಗಿ ಪರಿವರ್ತಿಸುವ ಪಕ್ಷದ ಸಂಘಟನೆಯೂ ಬಲವಾಗಿದೆ ಎಂದು ಹೇಳಿದರು.


ನಮ್ಮ ಹಿಂದಿನ ಸರ್ಕಾರ ದ ಸಾಧನೆ ಕೂಡಾ ಜನರ ಮುಂದಿದೆ. ಆದ್ದರಿಂದ ಐದು ರಾಜ್ಯಗಳ ಚುನಾವಣೆ ನಮ್ಮ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version