ಶ್ರೀನಗರ: ಕಾಶ್ಮೀರದ ವೀಶೇಷ ಸ್ಥಾನಮಾನವನ್ನು ಮರಳಿ ಪಡೆಯುವುದಕ್ಕಾಗಿ ಇಲ್ಲಿನ ಎಲ್ಲಾ ಪಕ್ಷಗಳನ್ನು ಒಟ್ಟು ಸೇರಿಸಿದ ಖ್ಯಾತಿ ಬಿಜೆಪಿಗೆ ಸಲ್ಲುತ್ತದೆ ಎಂದು ಕಾಶ್ಮೀರ ರಾಜಕಾರಣಿ ಸಜ್ಜಾದ್ ಲೋನ್ ಶುಕ್ರವಾರದಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ವಾಯತ್ತತೆಯ ಹಿಂಪಡೆಯುವಿಕೆಯು “ಅಲ್ಪ ದೃಷ್ಟಿ ಮತ್ತು ದ್ವೇಷದ ಪರಿಣಾಮ” ಎಂದು ಅವರು ಹೇಳಿದ್ದಾರೆ. 370ನೆ ವಿಧಿಯ ಮರುಜಾರಿಗಾಗಿ ಪ್ರಾದೇಶಿಕ ಸಂಘಟನೆಗಳು ತಮ್ಮ ದಶಕಗಳ ಹಳೆಯ ವೈರತ್ವವನ್ನು ಕೊನೆಗೊಳಿಸಿ ಐಕ್ಯವೇದಿಕೆ ಸ್ಥಾಪಿಸಿದ ಮರುದಿನ ಅವರ ಈ ಹೇಳಿಕೆ ಹೊರಬಿದ್ದಿದೆ.
ಬಿಜೆಪಿ-ಪಿಡಿಪಿ ಸರಕಾರದ ಮಾಜಿ ಸಚಿವ ಮತ್ತು ಪ್ರಸ್ತುತ ರಚಿಸಲಾಗಿರುವ ‘ಪೀಪಲ್ಸ್ ಅಲಯನ್ಸ್” ನ ಪ್ರಮುಖ ವಾಸ್ತುಶಿಲ್ಪಿ ಲೋನ್ ತಾನು ಬಂಧನದಿಂದ ಬಿಡುಗಡೆಗೊಂಡ ಬಳಿಕ ‘ಅಪರಿಚಿತ’ನ ಅನುಭವವವುಂಟಾಗಿದೆ ಮತ್ತು ಜಮ್ಮು ಕಾಶ್ಮೀರದ ಆಡಳಿತವನ್ನು ಹೊರಗಿನವರು ತೆಗೆದುಕೊಂಡಿದ್ದರು ಎಂದು ಅವರು ಹೇಳಿದರು.
ಕಳೆದ ಆಗಸ್ಟ್ ನಲ್ಲಿ ವಿಶೇಷ ಸ್ಥಾನಮಾನವನ್ನು ಹಿಂದೆಗೆಯುವ ಕ್ರಮದ ಬಳಿಕ ನೂರಾರು ರಾಜಕಾರಣಿಗಳೊಂದಿಗೆ ಬಂಧನಕ್ಕೊಳಗಾಗಿದ್ದ ಲೋನ್, ಜುಲೈ 31ರಂದು ಬಿಡುಗಡೆಗೊಂಡಿದ್ದರು. 370ನೆ ವಿಧಿಯ ಮರುಜಾರಿಗಾಗಿ ಹೋರಾಟವು ಸಂವಿಧಾನದ ಚೌಕಟ್ಟಿನೊಳಗೆ ನಡೆಯಲಿದೆ ಮತ್ತು ಹಿಂಸೆ ಹಾಗೂ ಅನಿಶ್ಚಿತತೆಯನ್ನು ಕೊನೆಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
“ಇದು ಸಂಘಟಿತ ಮೆಕಾನಿಸಂ ಆಗಿದೆ ಮತ್ತು ನಮ್ಮದೆನ್ನುವುದನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ದೇಶದ ಎಲಾ ಭಾಗಗಳಲ್ಲಿ ಇರುವ ಹಕ್ಕಿನ ಪ್ರಕಾರವೇ ನಾವು ಶಾಂತಿಯುತವಾಗಿ ಸಂವಿಧಾನಬದ್ಧವಾಗಿ ಹೋರಾಡಲಿದ್ದೇವೆ” ಎಂದು ಲೋನ್ ಹೇಳಿದ್ದಾರೆ.
“ರಾಜ್ಯದ ನಿವಾಸಿಗಳಾಗಿ ನಾವು ಇಲ್ಲೇ ಉಳಿಯಲಿದ್ದೇವೆ. ನಾವು ಪ್ರವಾಸಿಗರಲ್ಲ. ರಾಷ್ಟ್ರೀಯ ಸರಕಾರವು ಬರುತ್ತದೆ ಮತ್ತು ಹೋಗುತ್ತದೆ. ನಮ್ಮ ಮಕ್ಕಳ ಮೇಲೆ ಪರಿಣಾಮವನ್ನುಂಟುಮಾಡಬಲ್ಲ ಯಾವುದೇ ರಾಷ್ಟ್ರೀಯ ಸರಕಾರದ ನಿರ್ಣಯವನ್ನು ನಾವು ಪ್ರತಿರೋಧಿಸಬೇಕಾಗಿದೆ. ಇದರ ವಿರುದ್ಧ ಎದ್ದು ನಿಲ್ಲುವುದು ನಮ್ಮ ನೈತಿಕ ಕರ್ತವ್ಯವಾಗಿದೆ” ಎಂದು ಅವರು ಹೇಳಿದರು.