ಉಡುಪಿ: ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೆಪದಲ್ಲಿ ಶಿರವಸ್ತ್ರದ ಅಸ್ಮಿತೆಗಾಗಿ ಹೋರಾಡುತ್ತಿರುವ ಉಡುಪಿ ಹೆಣ್ಣುಮಕ್ಕಳ ವಿಳಾಸ, ವಯಸ್ಸು, ತಂದೆ ತಾಯಿಯ ಹೆಸರು ಇತ್ಯಾದಿ ಖಾಸಗಿ ವಿವರಗಳನ್ನು ಕರ್ನಾಟಕ ಬಿಜೆಪಿ ನಾಯಕರು ಹಂಚಿಕೊಂಡಿದ್ದು, ಈಗಾಗಲೇ ಆತಂಕದಲ್ಲಿರುವ ವಿದ್ಯಾರ್ಥಿನಿಯರನ್ನು ಮತ್ತಷ್ಟು ಭಯಪಡಿಸಿ ವಿಕೃತಿ ಮೆರೆದಿದ್ದಾರೆ.
“ಅಪ್ರಾಪ್ತ ಹೆಣ್ಣು ಮಕ್ಕಳ ವಿವರಗಳನ್ನು ಹಂಚಿಕೊಳ್ಳುವುದು ಟ್ವಿಟರ್ ಪಾಲಿಸಿಗೆ ವಿರುದ್ಧವೇ?” ಎಂದು ಆಲ್ಟ್ ನ್ಯೂಸ್ನ ಹಿರಿಯ ಪತ್ರಕರ್ತ ಮುಹಮ್ಮದ್ ಜುಬೈರ್ ಪ್ರಶ್ನಿಸಿದ್ದಾರೆ.
ಉಡುಪಿ ವಿದ್ಯಾರ್ಥಿನಿಯರ ದಾಖಲಾತಿ ವಿವರಗಳನ್ನು ಕಾಲೇಜು ಸೋರಿಕೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಈ ಕುರಿತು ಕಾಲೇಜು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು ತಾವು ಸ್ವೀಕರಿಸುತ್ತಿರುವ ಥ್ರೆಟ್ ಕಾಲ್ ಗಳಿಂದ ಭಯಗೊಂಡಿರುವುದಾಗಿ ಹೇಳಿದ್ದಾರೆ. ಸ್ಥಳೀಯ ಶಾಸಕ ರಘುಪತಿ ಭಟ್ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆದರೆ ಖಾಸಗಿ ವಿವರಗಳು ಹೇಗೆ ಸೋರಿಕೆಯಾದವು ಎಂಬ ಮಾಹಿತಿ ಇಲ್ಲ. ಆದರೆ ಈಗ ಬಿಜೆಪಿ ಬಿಜೆಪಿಯ ಟ್ವಿಟರ್ ಖಾತೆಯ ಮೂಲಕ ತಮ್ಮ ಖಾಸಗಿ ವಿವರಗಳನ್ನು ಹಂಚಿಕೊಳ್ಳಲಾಗಿದೆ ಎಂದು ಹೇಳಿದರು.