ನವದೆಹಲಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತನ್ನ ‘ಸೌಗತ್-ಎ-ಮೋದಿ’ಅಭಿಯಾನವನ್ನು ಆರಂಭಿಸಲು ಸಜ್ಜಾಗಿದ್ದು, ರಂಝಾನ್ ಗೆ ಮುಂಚಿತವಾಗಿ ದೇಶದಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ವಿಶೇಷ ಕಿಟ್ ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್‌ನಿಂದ ಪ್ರಾರಂಭವಾದ ಈ ಉಪಕ್ರಮವು ಬಡ ಮುಸ್ಲಿಂ ಕುಟುಂಬಗಳು ಯಾವುದೇ ಕಷ್ಟವಿಲ್ಲದೆ ಹಬ್ಬವನ್ನು ಆಚರಿಸುವುದನ್ನು ಖಚಿತಪಡಿಸುತ್ತದೆ ಎಂದು ವರದಿ ತಿಳಿಸಿದೆ.
ಅಭಿಯಾನದ ಭಾಗವಾಗಿ, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶದಾದ್ಯಂತ 32,000 ಮಸೀದಿಗಳೊಂದಿಗೆ ಸಂಪರ್ಕ ಸಾಧಿಸಿ ಅಗತ್ಯವಿರುವ ಮುಸ್ಲಿಮರಿಗೆ ಕಿಟ್‌ಗಳನ್ನು ತಲುಪಿಸಲಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ಅಭಿಯಾನದ ವಿಶಾಲ ದೃಷ್ಟಿಕೋನವನ್ನು ವಿವರಿಸಿದ್ದಾರೆ.
‘ಸೌಗತ್ ಎ ಮೋದಿ’ಯೋಜನೆಯು ಭಾರತೀಯ ಜನತಾ ಪಕ್ಷ(ಬಿಜೆಪಿ) ಮುಸ್ಲಿಂ ಸಮುದಾಯದಲ್ಲಿ ಕಲ್ಯಾಣ ಯೋಜನೆಗಳನ್ನು ಉತ್ತೇಜಿಸುವ ಮತ್ತು ಬಿಜೆಪಿ ಹಾಗೂ ಎನ್‌ಡಿಎಗೆ ರಾಜಕೀಯ ಬೆಂಬಲವನ್ನು ಹೆಚ್ಚಿಸುವ ಗುರಿಯೊಂದಿಗೆ ಪ್ರಾರಂಭಿಸಿರುವ ಅಭಿಯಾನವಾಗಿದೆ ಎಂದು ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಯಾಸಿರ್ ಜಿಲಾನಿ ಹೇಳಿದ್ದಾರೆ
‘ಸೌಗತ್ ಎ ಮೋದಿ’ ಅಭಿಯಾನದಡಿಯಲ್ಲಿ ವಿತರಿಸಲಾಗುವ ಕಿಟ್‌ಗಳು ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ವರ್ಮಿಸೆಲ್ಲಿ, ಖರ್ಜೂರ, ಡ್ರೈ ಫ್ರೂಟ್ ಮತ್ತು ಸಕ್ಕರೆಯನ್ನು ಒಳಗೊಂಡಿರುತ್ತವೆ.