Home ಟಾಪ್ ಸುದ್ದಿಗಳು ಅಂಗನವಾಡಿ ಮಕ್ಕಳ ಮೊಟ್ಟೆಯಲ್ಲೂ ಬಿಜೆಪಿ ಸಚಿವೆಯ ಭ್ರಷ್ಟಾಚಾರ!

ಅಂಗನವಾಡಿ ಮಕ್ಕಳ ಮೊಟ್ಟೆಯಲ್ಲೂ ಬಿಜೆಪಿ ಸಚಿವೆಯ ಭ್ರಷ್ಟಾಚಾರ!

ಕನ್ನಡ ಚಾನೆಲ್ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ

ಬೆಂಗಳೂರು: ಗರ್ಭಿಣಿಯರಿಗೆ ಮತ್ತು ಅಪೌಷ್ಠಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಮೊಟ್ಟೆ ವಿತರಿಸಲು ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮುಂದಾದ ಘಟನೆ ವರದಿಯಾಗಿದೆ.

‘ಮಾತೃಪೂರ್ಣ’ ಮೊಟ್ಟೆ ವಿತರಿಸುವ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟೆಂಡರ್ ಕರೆಯಲು ಸರ್ಕಾರ ನಿರ್ಧರಿಸಿದ್ದು, ಈ ಟೆಂಡರ್ ಅನ್ನು ತಮಗೆ ಬೇಕಾದವರಿಗೆ ನೀಡಲು ಶಶಿಕಲಾ ಜೊಲ್ಲೆ ಮುಂದಾಗಿದ್ದರು ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಕನ್ನಡ ಚಾನೆಲೊಂದರ ತಂಡ ಗಂಗಾವತಿ ಶಾಸಕರಾದ ಪರಣ್ಣ ಮನವಳ್ಳಿ ಅವರ ಮೂಲಕ ಸಚಿವೆಯನ್ನು ಭೇಟಿ ಮಾಡಿ ಟೆಂಡರ್ ಬಗ್ಗೆ ಮಾತನಾಡಿತ್ತು ಎಂದು ತಿಳಿದುಬಂದಿದೆ.

ನಿರ್ಗತಿಕರಿಗೆ ನೀಡುವ ಯೋಜನೆಯಲ್ಲಿ ಹಣ ಮಾಡುವ ದುರುದ್ದೇಶದಿಂದ ಸಚಿವೆ ಜೊಲ್ಲೆ ಟೆಂಡರ್ ಮೂಲಕ ಮೊಟ್ಟೆ ಖರೀದಿ ಪ್ರಕ್ರಿಯೆಗೆ ಮುಂದಾಗಿದ್ದರು. ಸಚಿವೆ ಬಡವರ, ಅಪೌಷ್ಠಿಕ ಮಕ್ಕಳ ಯೋಜನೆಯಲ್ಲಿ ಅಕ್ರಮಕ್ಕೆ ಮುಂದಾಗಿ ಕಮಿಷನ್ ಪಡೆಯಲು ಮುಂದಾಗಿದ್ದಾರೆ.

ಕುಟುಕು ಕಾರ್ಯಾಚರಣೆ ನಡೆಸಿದ ಕನ್ನಡ ಚಾನೆಲ್ ತಂಡದ ಜೊತೆ ಮಾತನಾಡಿದ ಸಚಿವೆ ನಿಮಗೆ ಟೆಂಡರ್ ಬೇಕಾದರೆ ಹಣಕಾಸು ವ್ಯವಹಾರ ಚಿಕ್ಕೋಡಿಯಲ್ಲಿರುವ ಸಹೋದರ ಸಂಜಯ್ ಅರಗಿ ಜೊತೆ ಮಾತನಾಡಿ 25 ಲಕ್ಷ ರೂ. ನೀಡುವಂತೆ ಸೂಚನೆ ಕೊಟ್ಟಿದ್ದಾರೆ.  

ಅಂಗನವಾಡಿ ಮೂಲಕ ವಿತರಿಸಲಾಗುವ ಮೊಟ್ಟೆ ಪೂರೈಕೆ ಟೆಂಡರ್ ಗಾಗಿ ಡೀಲ್ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಡೀಲ್ ಗೆ ಒಪ್ಪಿಕೊಂಡಿರುವುದು ಕುಟುಕು ಕಾರ್ಯಾಚರಣೆಯ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಸಂಪುಟ ಸಚಿವೆಯ ಭ್ರಷ್ಟ ಮುಖ ಬಯಲಾಗಿದೆ.   

Join Whatsapp
Exit mobile version