ಔರಂಗಾಬಾದ್ : ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುವುದು ಹವ್ಯಾಸವಾಗಿದೆ ಎಂದು ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಆಪಾದಿಸಿದೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ನಿರ್ಣಯಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಮಾಜಿ ಸಚಿವ ಅನಿಲ್ ದೇಶ್ ಮುಖ್ ಅವರಿಗೆ ಸೇರಿದ ಆಸ್ತಿಗಳ ಮೇಲೆ ಈಡಿ ದಾಳಿ ನಡೆಸಿರುವ ನಡುವೆ ಎನ್ ಸಿಪಿಯ ಈ ಹೇಳಿಕೆ ಹೊರಬಿದ್ದಿದೆ.
ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವ ಹವ್ಯಾಸ ಬಿಜೆಪಿಗಿದೆ ಮತ್ತು ಅದರ ನಾಯಕರು ಈಗ ತನಿಖೆಗಳ ಬಗ್ಗೆ ನಿರ್ಣಯ ಮಂಡಿಸುತ್ತಿದ್ದಾರೆ. ಅವರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ ಎಂದು ಎನ್ ಸಿಪಿ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.