ಈಡಿಗ ಬಿಲ್ಲವ ಸಮುದಾಯದ ದಾರಿ ತಪ್ಪಿಸುತ್ತಿರುವ ಬಿಜೆಪಿ ಸರ್ಕಾರ: ಪ್ರಣವಾನಂದ ಸ್ವಾಮಿ

Prasthutha|

ಮಂಗಳೂರು: ಈಡಿಗ ಬಿಲ್ಲವ ಸಮುದಾಯದ ದಾರಿ ತಪ್ಪಿಸುವ ಕೆಲಸವನ್ನು ಬೊಮ್ಮಾಯಿಯವರ ಸರಕಾರ ನಿಲ್ಲಿಸಬೇಕು ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸುನೀಲ್ ಕುಮಾರ್ ಅವರು ಸಮಾಜವನ್ನು ವಂಚಿಸುತ್ತಿದ್ದಾರೆ. 14 ಜಾತಿ ನಿಗಮಗಳನ್ನು ಈಗಾಗಲೇ ರಚಿಸಲಾಗಿದೆ. ಆದರೆ ಈಡಿಗ ಬಿಲ್ಲವ ನಿಗಮ ಏಕೆ ಸ್ಥಾಪಿಸುತ್ತಿಲ್ಲ? ನಮ್ಮ ಮತದಾರರನ್ನು ದುರುಪಯೋಗ ಮಾಡಿ ಬಿಜೆಪಿಯು ಬ್ರಾಹ್ಮಣರ ಬೇಳೆ ಬೇಯಿಸಿಕೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಜನರು ಎಷ್ಟು ಕಾಲ ಹೀಗೆ ವಂಚನೆಗೆ ಒಳಗಾಗಬೇಕು. ಹೀಗಾದರೆ ನಮ್ಮ ಜನರು ಇವರಿಗೆ ಬುದ್ಧಿ ಕಲಿಸುವರು ಎಂದು ಸ್ವಾಮಿ ಎಚ್ಚರಿಕೆ ನೀಡಿದರು.

ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಮಠದಿಂದ ಇಲ್ಲವೇ ಮಂಗಳೂರು ಗೋಕರ್ಣನಾಥೇಶ್ವರ ದೇವಸ್ಥಾನದಿಂದ ವಿಧಾನ ಸೌಧಕ್ಕೆ ಪ್ರತಿಭಟನಾ ನಡಿಗೆ ನಡೆಸುತ್ತೇವೆ. ರಾಜ್ಯದಲ್ಲಿ ವೈನ್ ಶಾಪ್ ಗಳು ಬಾರ್ ಗಳು 13,000 ಇದ್ದರೆ ನಮ್ಮ ಜನಾಂಗದ್ದು 3,000 ಮಾತ್ರ. ಆದ್ದರಿಂದ ನಮ್ಮ ಕುಲ ಕಸುಬು ಮಾಡಲು ಅವಕಾಶ ಕೊಡಬೇಕು ಇಲ್ಲವೇ ಮುಕ್ತ ವೈನ್ ಶಾಪ್ ಅವಕಾಶ ನೀಡಬೇಕು ಎಂದು ಸ್ವಾಮೀಜಿ  ಆಗ್ರಹಿಸಿದರು.

- Advertisement -

ಸರಕಾರ 5 ಕೋಟಿ ರೂಪಾಯಿ ಅನುದಾನ ನೀಡಿದೆ. ನಮ್ಮ ಜನಾಂಗದ ಒಬ್ಬೊಬ್ಬರಿಗೆ 5 ರೂಪಾಯಿ ಬರುವುದಿಲ್ಲ. ಬಿಜೆಪಿ ಸರಕಾರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಬಿಟ್ಟು ಸಮಾಜದ ಹಕ್ಕು ಪೂರೈಸಲಿ. ಇಲ್ಲದಿದ್ದರೆ ಸೋಲಿನತ್ತ ಸಾಗಲಿ ಎಂದು ಪ್ರಣವಾನಂದ ಸ್ವಾಮಿ ಎಚ್ಚರಿಕೆ ನೀಡಿದರು.

Join Whatsapp
Exit mobile version