ತಿರುವನಂತಪುರಂ : ಕರ್ನಾಟಕದಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ, ತಮ್ಮ ಪಕ್ಷದಲ್ಲಿ ಮುಸ್ಲಿಮರಿಗೆ ಸೀಟು ಕೊಡುವುದಿಲ್ಲ ಎಂದು ಮಾತನಾಡುತ್ತಾರೆ. ಆದರೆ, ಕೇರಳದಲ್ಲಿ ಇದೇ ಮುಸ್ಲಿಮರ ಓಲೈಕೆಯಲ್ಲಿ ಅವರ ಪಕ್ಷ ಮುಂದಾಗಿದೆ. ಹೌದು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಲಪ್ಪುರಂ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರಿಗೂ ಬಿಜೆಪಿ ಟಿಕೆಟ್ ಕೊಟ್ಟಿದೆ.
ಮುಸ್ಲಿಮರ ಬಾಹುಳ್ಯವುಳ್ಳ ಮಲಪ್ಪುರಂ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಮುಸ್ಲಿಮ್ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಹಲವು ಮುಸ್ಲಿಮ್ ಪುರುಷರಿಗೆ ಟಿಕೆಟ್ ನೀಡಲಾಗಿದ್ದು, ಅದರಲ್ಲಿ ಇಬ್ಬರು ಮುಸ್ಲಿಂ ಅಭ್ಯರ್ಥಿಗಳೂ ಇರುವುದು ವಿಶೇಷವಾಗಿದೆ. ಕೇರಳದ ಮಲಪ್ಪುರಂನಲ್ಲಿ ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.
ವಂಡೂರು ಗ್ರಾಮ ಪಂಚಾಯತಿಯ ಆರನೇ ವಾರ್ಡ್ ಗೆ ಸ್ಥಳೀಯ ನಿವಾಸಿ ಟಿ.ಪಿ. ಸುಲ್ಫತ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಪೊನ್ಮುದಂ ಗ್ರಾಮ ಪಂಚಾಯತ್ ನ ವಾರ್ಡ್ 9 ರಲ್ಲಿ ಚೆಮ್ಮಡ್ ನಿವಾಸಿ ಆಯಿಷಾ ಹುಸೇನ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿಯುವುದಕ್ಕೆ ತಮಗೆ ತಮ್ಮದೇ ಆದ ಕಾರಣಗಳಿದ್ದವು ಎಂದು ಇಬ್ಬರು ಅಭ್ಯರ್ಥಿಗಳೂ ಹೇಳುತ್ತಾರೆ.