Home ಟಾಪ್ ಸುದ್ದಿಗಳು ಬಿಜೆಪಿ ಕೊನೆ ಹಂತದ ಆಟ ಆಡಲು ಶುರು ಮಾಡಿದೆ: ಕುಮಾರಸ್ವಾಮಿ ಗಂಭೀರ ಆರೋಪ

ಬಿಜೆಪಿ ಕೊನೆ ಹಂತದ ಆಟ ಆಡಲು ಶುರು ಮಾಡಿದೆ: ಕುಮಾರಸ್ವಾಮಿ ಗಂಭೀರ ಆರೋಪ

ವಿಜಯಪುರ : ಬಹಿರಂಗ ಪ್ರಚಾರ ಅಂತ್ಯವಾದ ಮೇಲೂ ಆಡಳಿತಾರೂಢ ಬಿಜೆಪಿಯು ಸಿಂಧಗಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವ ಹೀನ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.


ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ನಿನ್ನೆಯಿಂದ ಸಚಿವರಾದ ವಿ.ಸೋಮಣ್ಣ, ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಮಂತ್ರಿಗಳು ಇವತ್ತಿಗೂ ಸಮೀಪದ ರೆಸಾರ್ಟ್ʼನಲ್ಲಿಯೇ ಇದ್ದಾರೆ. ಬುಧವಾರ ಸಂಜೆವರೆಗೂ ಕುಮಾರಸ್ವಾಮಿ ಅವರಿಗೆ ಸಿಂಧಗಿಯಲ್ಲಿ ಓಡಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಗುರುವಾರದಿಂದ ನಮ್ಮ ಆಟ ತೋರಿಸುತ್ತೇವೆ ಎಂದು ಸೋಮಣ್ಣ ಅವರು ನಿನ್ನೆಯೇ ಹೇಳಿದ್ದರು. ಈಗ ಅವರು ತಮ್ಮ ಕೊನೆಯ ಹಂತದ ಆಟ ತೋರಿಸಲು ಹೊರಟಿದ್ದಾರೆ” ಎಂದು ದೂರಿದರು.


ನನಗೆ ಬಂದ ಮಾಹಿತಿ ಪ್ರಕಾರ ಪ್ರತಿ ಹಳ್ಳಿಗೆ 30ರಿಂದ 40 ಲಕ್ಷ ರೂಪಾಯಿ ಹಂಚಿಕೆ ಆಗಿದೆ. ಖುದ್ದು ಸಚಿವರೇ ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಬಂದಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಕೆಲಸ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.


ಮತಗಟ್ಟೆಗೆ ಐದು ಲಕ್ಷ, ಒಂದು ಮತಕ್ಕೆ ಒಂದು ಸಾವಿರ!
ಕೆಲ ಹಳ್ಳಿಗಳಲ್ಲಿ ಐದರಿಂದ ಆರು ಮತಗಟ್ಟೆಗಳಿವೆ. ಅಂದರೆ ಪ್ರತೀ ಮತಗಟ್ಟೆಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ ಹಾಗೂ ಒಂದು ಮತಕ್ಕೆ 1,000 ರೂ. ಪೀಕ್ಸ್ ಮಾಡಿದ್ದಾರೆ ಎಂದಾಯಿತು. ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರಕಾರ ರಚನೆ ಮಾಡಿದ ಮೇಲೆ ಎಲ್ಲ ಚುನಾವಣೆಗಳನ್ನು ಗೆದ್ದಿರುವುದು ಹಣದ ಹೊಳೆ ಹರಿಸಿಯೇ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಾರ್ವತ್ರಿಕ ಚುನಾವಣೆ ಬಂದಾಗ ಹೀಗೆ ಹಣ ಹಂಚುವ ದಂಧೆ ಇಷ್ಟು ಸುಲಭವಾಗಿ ನಡೆಯಲ್ಲ ಎಂದ ಅವರು; ಮುಖ್ಯಮಂತ್ರಿ ಹೇಳುತ್ತಾರೆ, ಹಣದ ಚೀಲ ಹೊತ್ತು ಅಭ್ಯಾಸ ಇರುವುದು ಕಾಂಗ್ರೆಸ್ʼನವರಿಗೆ ಅಂತಾರೆ. ಆದರೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಾಗ ಸರಕಾರಿ ಅಧಿಕಾರಿಯ ಕಾರಿನಲ್ಲೇ ಹಣ ಸಿಕ್ಕಿಬಿತ್ತು. ಆ ಹಣ ಸಿಕ್ಕಿದ್ದು ಗುಂಡ್ಲುಪೇಟೆಯಲ್ಲಿ. ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಕಾಂಗ್ರೆಸ್ ಪಕ್ಷದವರು ಮಾಡಿದ ತಂತ್ರಗಾರಿಕೆಯನ್ನೇ ಈಗ ಬಿಜೆಪಿಯವರು ಅಳವಡಿಸಿಕೊಂಡಿದ್ದಾರೆಂದು ದೂರಿದರು.

ಇಷ್ಟಾದರೂ ಕ್ಷೇತ್ರದ ಮತದಾರರು ಹಣಕ್ಕಿಂತ ಹೆಚ್ಚಾಗಿ ತಮಗೆ ಬದುಕು ತೋರಿಸಿರುವ ಜೆಡಿಎಸ್ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ. ದೇವೇಗೌಡರು ಹಾಗೂ ನಾನು ನೀಡಿರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅಭಿಮಾನ ಇದೆ. ಈವರೆಗೂ ನಾನು ಎಂಬತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿದ್ದೇನೆ. ಎಲ್ಲೇ ಹೋದರೂ ಜನ ನಮ್ಮ ಪಕ್ಷ ನೀಡಿರುವ ಕೊಡುಗೆಗಳ ಬಗ್ಗೆಯೇ ಮಾತನಾಡಿದ್ದರು, ರಾಷ್ಟ್ರೀಯ ಪಕ್ಷಗಳು ಒಡ್ಡುವ ಆಮಿಷಗಳಿಗೆ ಜನರು ಒಳಗಾಗಬಾರದು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಹಣ ಬಲದಿಂದ ಚುನಾವಣೆ ಗೆಲ್ಲಬೇಕು ಎಂದು ಹೊರಟಿವೆಯೇ ವಿನಾ, ಅಭಿವೃದ್ಧಿಯಿಂದಲ್ಲ ಎಂದ ಅವರು, ಕ್ಷೇತ್ರದ ಜನರಿಗೆ ನಾವು ಅಭಿವೃದ್ಧಿ ವಿಷಯಗಳನ್ನಷ್ಟೇ ಹೇಳಿದ್ದೇವೆ. ಆ ಮೂಲಕ ನಾವು ಸಿಂಧಗಿ ಕ್ಷೇತ್ರದಲ್ಲಿ ಜಯ ಸಾಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Join Whatsapp
Exit mobile version