ಮಂಗಳೂರು : ಕೋವಿಡ್ ಸಂಕಷ್ಟದ ಸಮಯದಲ್ಲಿ ಈ ಬಾರಿ ಸರಳ ಕ್ರಿಸ್ಮಸ್ ಆಚರಿಸುವಂತೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ರೆ.ಡಾ. ಪೀಟರ್ ಪೌಲ್ ಸಲ್ದಾನಾ ಕರೆ ನೀಡಿದ್ದಾರೆ. ಬಿಷಪ್ ಹೌಸ್ ನಲ್ಲಿ ಇಂದು ಅವರು ಸುದ್ದಿಗೋಷ್ಠಿ ನಡೆಸಿ, ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.
ನಾವೇನು ಉಳಿಸಿದ್ದೇವೆಯೋ ಅದನ್ನು ಬಡವರೊಂದಿಗೆ ಹಂಚಿಕೊಂಡು ಈ ಬಾರಿ ಸರಳವಾಗಿ ಕ್ರಿಸ್ಮಸ್ ಆಚರಣೆ ನಮ್ಮದಾಗಲಿ ಎಂದು ಅವರು ಹೇಳಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯುವ ಪ್ರಾರ್ಥನಾ ವಿಧಿ ವಿಧಾನಗಳಲ್ಲಿ ಹೆಚ್ಚು ಜನ ಸೇರದಂತೆ, ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಿನಿಂದ ಪೂಜೆಗಳನ್ನು ಚರ್ಚ್ ಗಳಲ್ಲಿ ನೆರವೇರಿಸಲಾಗುವುದು. ಚರ್ಚ್ ಗಳಲ್ಲಿ ವಿವಿಧ ಸಮಯಗಳಲ್ಲಿ ಪ್ರಾರ್ಥನೆಗಳನ್ನು ನಡೆಸುವ ಮೂಲಕ ಹೆಚ್ಚು ಭಕ್ತರು ಸೇರುವುದನ್ನು ನಿಯಂತ್ರಿಸಲಾಗುವುದು. ಚರ್ಚ್ ಗಳಲ್ಲಿ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಂಜೆಯ ವೇಳೆಗೆ ನಡೆಯುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ರೆ.ಡಾ. ಪೀಟರ್ ಪೌಲ್ ಸಲ್ದಾನಾ ಹೇಳಿದ್ದಾರೆ.
ಚಿಂದಿಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಬಾಲಏಸು ಆಹಾರವಿಲ್ಲದ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು. ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು. ಉದ್ಯೋಗ ಕಳೆದುದರಿಂದ ತಮ್ಮ ಕುಟುಂಬಗಳಲ್ಲಿ ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆ ಅರಿತವರು. ಕೋವಿಡ್ ಮತ್ತು ಇತರ ರೋಗಗಳಿಂದ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಕಷ್ಟಪಡುತ್ತಿರುವ ಹೆತ್ತವರ ದುಃಖವನ್ನು ಅರಿತವರು ಏಸು. ಹೀಗಾಗಿ ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವು ಬೆರೆತು ಕ್ರಿಸ್ಮಸ್ ಆಚರಿಸೋಣ ಎಂದು ಅವರು ಹೇಳಿದ್ದಾರೆ.
ಮಂಗಳೂರು ಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ಟೆಲಿನೊ ಹಾಗೂ ಫಾ. ವಿಕ್ಟರ್ ವಿಜಯ್ ಲೋಬೋ, ಫಾ. ರಿಚರ್ಡ್ ಡಿಸೋಜಾ ಮತ್ತು ಮಾಧ್ಯಮ ಸಲಹೆಗಾರ ಎಲಿಯಾಸ್ ಫರ್ನಾಂಡಿಸ್ ಉಪಸ್ಥಿತರಿದ್ದರು.