ತಿರುವನಂತಪುರಂ : ಕೇರಳದ ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದ್ದು, ಸುಮಾರು 50,000ಕ್ಕೂ ಹೆಚ್ಚು ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ, ಎರಡು ಮೂರು ದಿನಗಳಲ್ಲಿ ಇದು ನಿಯಂತ್ರಣಕ್ಕೆ ಬರಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭೋಪಾಲ್ ನ ಪ್ರಯೋಗಾಲಯಕ್ಕೆ ಕಳುಹಿಸಲಾದ ಎಂಟು ಮಾದರಿಗಳಲ್ಲಿ ಐದರಲ್ಲಿ ಉಪ ಮಾದರಿಯ ವೈರಸ್ ಪತ್ತೆಯಾಗಿದೆ. ಅಳಪುಝ ಜಿಲ್ಲೆಯ ನಾಲ್ಕು ಪಂಚಾಯತ್ ಮತ್ತು ಕೊಟ್ಟಾಯಂನ ಒಂದು ಪಂಚಾಯತ್ ವ್ಯಾಪ್ತಿಯಲ್ಲಿ ಬಾತುಕೋಳಿಗಳಲ್ಲಿ ವೈರಸ್ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಬಾತುಕೋಳಿಗಳು ದೊಡ್ಡ ಪ್ರಮಾಣದಲ್ಲಿ ಸಾವಿಗೀಡಾಗಿರುವ ಬಗ್ಗೆ ಸ್ಥಳೀಯ ಕೋಳಿ ಸಾಕಣಿಕೆದಾರರು ಅಲ್ಲಿನ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದರು.
ಇನ್ನೊಂದೆಡೆ ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲೂ ಹಕ್ಕಿಜ್ವರ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.