ಬಿಹಾರ್: ದೂರು ನೀಡಲು ಠಾಣೆಗೆ ಬಂದ ಮಹಿಳೆಯರಿಂದ ಎಣ್ಣೆ ಮಸಾಜ್ ಮಾಡಿಸಿಕೊಂಡ ವೀಡಿಯೋ ವೈರಲ್ ಆದ ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನೌಹಟ್ಟಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಎಂಬಾತನನ್ನು ಅಮಾನತು ಮಾಡಲಾಗಿದೆ.
ಶಶಿಭೂಷನ್ ಎಂಬಾತ ದೂರು ನೀಡಲು ಠಾಣೆಗೆ ಆಗಮಿಸಿದ ಮಹಿಳೆಯೊಬ್ಬರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಶಶಿಭೂಷನ್ ಶರ್ಟ್ ತೆಗೆದು ಮಹಿಳೆಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತು ಪೋನ್ ನಲ್ಲಿ ಮಾತನಾಡುತ್ತಿರುವ ದೃಶ್ಯಾವಳಿ ವೀಡಿಯೋದಲ್ಲಿ ಸೆರೆಯಾಗಿದೆ.
ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಹರ್ಸಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಅವರು ಶಶಿಭೂಷನ್ ಸಿನ್ಹಾ ಎಂಬವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.