ಬಿಹಾರ: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ ನೇಮಕಾತಿಯ ‘ಅಗ್ನಿಪಥ್’ ಯೋಜನೆಯ ವಿರುದ್ಧ ಪ್ರತಿಭಟನೆಯು ದೇಶಾದ್ಯಂತ ವ್ಯಾಪಕವಾಗುತ್ತಿದ್ದು ಬಿಹಾರದಲ್ಲಿ ಪ್ರತಿಭಟನಯು ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯ ವೇಳೆ ಬಿಹಾರ ಉಪ ಮುಖ್ಯಮಂತ್ರಿ ರೇಣು ದೇವಿಯ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು, ಬಿಜೆಪಿ ಶಾಸಕರ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ.
ಜೂನ್ 15 ರಿಂದ ಬಿಹಾರದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಇಂದು ಹಿಂಸಾರೂಪಕ್ಕೆ ತಿರುಗಿದ್ದು ಬಿಹಾರದ ಸಾಸಾರಾಮ್ ನಲ್ಲಿರುವ ಟೋಲ್ ಗೇಟ್ ಅನ್ನು ಭಸ್ಮಗೈದಿದ್ದಾರೆ. ಅಲ್ಲದೇ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆತಿಯಾದಲ್ಲಿರುವ ಬಿಹಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರ ನಿವಾಸದ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಅಗ್ನಿಪಥ ಯೋಜನೆ ವಿರುದ್ಧ ಬಿಹಾರ ಮಾತ್ರವಲ್ಲದೆ, ಉತ್ತರ ಪ್ರದೇಶದ, ರಾಜಸ್ಥಾನ, ತೆಲಂಗಾಣ ಹಾಗೂ ಹರಿಯಾಣದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವೆಡೆ ಪೊಲೀಸರು ಲಾಠಿ ಚಾರ್ಚ್ ಅನ್ನೂ ನಡೆಸಿದ್ದಾರೆ. ತೆಲಂಗಾಣದಲ್ಲಿ ಪೊಲೀಸ್ ಶೂಟೌಟ್ ಗೆ ಒಬ್ಬರು ಬಲಿಯಾಗಿದ್ದಾರೆ.