‘ಬಿಗ್ ಬಾಸ್’, ಕನ್ನಡ ಸೀಸನ್ 11 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಹಳ್ಳಿ ಹೈದ ಹನುಮಂತು ವಿಜೇತರಾಗಿ ಹೊರಹೊಮ್ಮಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಫಿನಾಲೆಗೆ ತಲುಪಿದ ಮೊದಲ ಸ್ಪರ್ಧಿಯಾಗಿದ್ದರು. ಕಂಪ್ಲೀಟ್ ಟಾಸ್ಕ್ಗಳಿಂದಲೇ ತುಂಬಿದ್ದ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ಕೊಟ್ಟು, ತಮ್ಮ ಸಾಮರ್ಥ್ಯ ಸಾಬೀತುಪಡಿಸಿ, ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ಹನುಮಂತು ಅವರೀಗ ಟ್ರೋಫಿ ಗೆದ್ದಿದ್ದಾರೆ. ಅವರಿಗೆ ಬಿಗ್ ಬಾಸ್ ಬಹುಮಾನ ಮೊತ್ತವಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಸಿಕ್ಕಿದೆ. ಆದರೆ, ಇದರಲ್ಲಿ ಸಂಪೂರ್ಣ ಮೊತ್ತ ಅವರಿಗೆ ಸಿಗೋದಿಲ್ಲ.
ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು.
1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ.
ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.
ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್ ಆದ ತ್ರಿವಿಕ್ರಂ ಅವರೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 15 ಲಕ್ಷ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಅವರಿಗೆ 10,50,000 ಮಾತ್ರ ಸಿಗಲಿದೆ. ಉಳಿದ ಮೊತ್ತ ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ. ಇನ್ನು, ರಜತ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, ಅವರ ಕೈ ಸೇರೋದು 7 ಲಕ್ಷ ರೂಪಾಯಿ ಮಾತ್ರ.