ಕೊಲಂಬೊ: ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂಬ ಕಾರಣ ನೀಡಿರುವ ಶ್ರೀಲಂಕಾದ ಸಚಿವ ಸಂಪುಟವು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಇದಕ್ಕೆ ಭಾರಿ ಪರ- ವಿರೋಧಗಳು ವ್ಯಕ್ತವಾಗಿದ್ದು, ವಿವಾದವನ್ನೂ ಸೃಷ್ಟಿಸಿದೆ. ಆದರೆ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಇಂಥದ್ದೊಂದು ಕ್ರಮ ಅನಿವಾರ್ಯ ಎಂದು ಇಲ್ಲಿಯ ಸರ್ಕಾರ ಹೇಳಿದೆ.
ಕಳೆದ ಮಾರ್ಚ್‌ನಲ್ಲಿ ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ, ಬುರ್ಖಾಗಳನ್ನು ನಿಷೇಧಿಸಲು ಸಂಪುಟದ ಅನುಮೋದನೆಯನ್ನು ಕೋರಿದ್ದರು. ನಂತರ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅದರ ನಡುವೆಯೂ ಇದೀಗ ಶ್ರೀಲಂಕಾ ಸಚಿವ ಸಂಪುಟ ಬುರ್ಖಾ ನಿಷೇಧಕ್ಕೆ ಅನುಮೋದನೆ ನೀಡಿದೆ.
“ಈಸ್ಟರ್ ಭಾನುವಾರದಂದು ಹೋಟೆಲ್ ಗಳು ಮತ್ತು ಚರ್ಚುಗಳ ಮೇಲೆ ಸಂಘಟಿತ ಭಯೋತ್ಪಾದಕ ದಾಳಿಗಳ ಅಲೆಯ ಎರಡು ವರ್ಷಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಸಂಪುಟ ವಕ್ತಾರ ಮತ್ತು ವಾರ್ತಾ ಸಚಿವ ಕೆಹಲೀಯಾ ರಂಬೂಕ್ವೆಲ್ಲ ಹೇಳಿದ್ದಾರೆ.