ಅಹ್ಮದಾಬಾದ್: ನೂತನ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅವರನ್ನು ಬಿಜೆಪಿ ಆಯ್ಕೆಮಾಡಿ ಅಚ್ಚರಿ ಮೂಡಿಸಿದೆ.
ನಿನ್ನೆ ಮಹತ್ವದ ಬೆಳವಣಿಗೆಯಲ್ಲಿ ದಿಢೀರ್ ಆಗಿ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಮುಖ್ಯಮಂತ್ರಿ ಹುದ್ದೆಗೆ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಗಾಟ್ಲೊಡಿಯಾ ಕ್ಷೇತ್ರದಿಂದ 1,17,000 ಮತಗಳಿಂದ ಗೆದ್ದಿದ್ದರು.
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದರು.
ಸಭೆಯಲ್ಲಿ ಸರ್ವಾನುಮತದಿಂದ ಭೂಪೇಂದ್ರ ಪಟೇಲ್ ರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತೋಮರ್ ತಿಳಿಸಿದರು.