ಬೆಂಗಳೂರು: ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ಹೆತ್ತ ತಾಯಿಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಪುತ್ರನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣ ಮೂಲದ ಬಾಗಲಗುಂಟೆಯ ನಿವಾಸಿ ಶಾಂತಾಬಾಯಿ (82) ಕೊಲೆಯಾದವರು. ಇವರ ಪುತ್ರ ಮಹೇಂದ್ರ ಸಿಂಗ್ (56) ಬಂಧಿತ ಆರೋಪಿ.
ಮಹೇಂದ್ರ ಸಿಂಗ್ ಬಾಗಲಗುಂಟೆಯ ಮುನೇಶ್ವರ ನಗರದ ಮನೆಯೊಂದರಲ್ಲಿ ತಾಯಿ ಜೊತೆ ಕಳೆದ 5 ವರ್ಷಗಳಿಂದ ವಾಸಿಸುತ್ತಿದ್ದ. ಇವರ ತಾಯಿ ಹೊಂದಿದ್ದ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಇನ್ನು ಶಾಂತಾಬಾಯಿ ಪತಿ ಸರ್ಕಾರಿ ನೌಕರನಾಗಿ ಮೃತಪಟ್ಟಿದ್ದರಿಂದ ಇವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಬರುತಿತ್ತು. ಬಾಡಿಗೆ ಹಾಗೂ ಪಿಂಚಣಿ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇನ್ನು ಮಹೇಂದ್ರ ಸಿಂಗ್ ನ ಕುಡಿತದ ಚಟದಿಂದ ಬೇಸತ್ತು ಪತ್ನಿ ಹಾಗೂ ಮಕ್ಕಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.
ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಂದ್ರ ಸಿಂಗ್ ಕೆಲಸಕ್ಕೆ ಹೋಗದೆ ಪ್ರತಿದಿನ ಮದ್ಯಪಾನ ಮಾಡುತ್ತಿದ್ದನು. ಮದ್ಯ ಸೇವಿಸಲು ತಾಯಿ ಬಳಿ ಹಣ ಕೇಳುತ್ತಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಗುರುವಾರ ರಾತ್ರಿ 9.30 ರ ಸುಮಾರಿಗೆ ಮದ್ಯಪಾನ ಮಾಡಲು ಹಣ ಕೊಡುವಂತೆ ತಾಯಿಯನ್ನು ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ಕೊಲೆ ಮಾಡಿದ್ದ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣ ನಡೆದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.