Home ಟಾಪ್ ಸುದ್ದಿಗಳು ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಂದ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗ...

ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಂದ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗ SPಗೆ ಮನವಿ

ಮಂಗಳೂರು: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕೊಂದು ಕಾರಿನಲ್ಲಿ ಸುಟ್ಟ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಜಿಲ್ಲಾ ಪೊಲೀಸ್ ಅಧೀಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ದುಷ್ಕರ್ಮಿಗಳ ತಂಡವೊಂದು ಮೋಸದಿಂದ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರು ಯುವಕರನ್ನು ತುಮಕೂರಿಗೆ ಕರೆಸಿ ಹಣ ದೋಚಿ ಹತ್ಯೆ ಮಾಡಿದೆ. ಹತ್ಯೆಗೀಡಾದವರು 6 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಕೊಲೆಗಡುಕರು 60 ಲಕ್ಷದಿಂದ 1 ಕೋಟಿ ರೂ.ವರೆಗೆ ದೋಚಿದ್ದಾರೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಬಯಲಿಗೆಳೆಯಬೇಕು. ಮೋಸದ ಜಾಲದ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಬೇಕು. ಆ ಮೂಲಕ ಈ ಮೂರು ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಇನ್ನು ಮುಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮ.ನ.ಪಾ. ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಶುಭಾಷ್ಚಂದ್ರ ಶೆಟ್ಟಿ ಇದ್ದರು.

ಇದಕ್ಕೂ ಮುನ್ನ ಕೊಲೆಯಾದ ಬೆಳ್ತಂಗಡಿಯ ಮೂವರು ಯುವಕರ ಮನೆಗೆ ಭೇಟಿ ನೀಡಿದ ನಿಯೋಗ, ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿತು.

Join Whatsapp
Exit mobile version