ನವದೆಹಲಿ: ಮುಂಬರುವ ದಿನಗಳಲ್ಲಿ ಸಂಸ್ಥೆಯು ವಿಮಾನಗಳ ಕಾರ್ಯಾಚರಣೆಯನ್ನು ತಗ್ಗಿಸಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಅಲೋಕ್ ಸಿಂಗ್ ಹೇಳಿದ್ದಾರೆ.
ಅನಾರೋಗ್ಯದ ಕಾರಣ ನೀಡಿ ಕ್ಯಾಬಿನ್ ಸಿಬ್ಬಂದಿ ಏಕಾಏಕಿ ರಜೆ ಹಾಕಿರುವ ಹಿನ್ನೆಲೆಯಲ್ಲಿ 90ಕ್ಕೂ ಅಧಿಕ ದೇಶೀಯ ವಿಮಾನಗಳ ಹಾರಾಟ ವಿಳಂಬ ಮತ್ತು ರದ್ದು ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.
‘ಈ ವ್ಯತ್ಯಯವು ನಮ್ಮ ವಿಮಾನ ಕಾರ್ಯಾಚರಣಾ ಜಾಲದಾದ್ಯಂತ ಆಗಿದ್ದು, ಒತ್ತಾಯಪೂರ್ವಕವಾಗಿ ಮುಂದಿನ ಕೆಲ ದಿನಗಳಿಗೆ ಶೆಡ್ಯೂಲ್ ಆಗಿರುವ ವಿಮಾನಗಳ ಸಂಚಾರ ಕಡಿತಗೊಳಿಸಬೇಕಿದೆ. ಈ ಮೂಲಕ ಕ್ಯಾಬಿನ್ ಸಿಬ್ಬಂದಿ ಕೊರತೆಯನ್ನು ನಿಭಾಯಿಸಬೇಕಿದೆ’ಎಂದೂ ಅವರು ಹೇಳಿದ್ದಾರೆ.
ಇದೇವೇಳೆ, ಸಂಕಷ್ಟದ ಸಂದರ್ಭದಲ್ಲಿ ಕಂಪನಿಯ ನಿಗದಿತ ಕೆಲಸಕ್ಕೆ ಹಾಜರಾಗಿ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಅವರು, ಧನ್ಯವಾದ ತಿಳಿಸಿದ್ದಾರೆ.