Home ಟಾಪ್ ಸುದ್ದಿಗಳು ಬೆಳ್ತಂಗಡಿ: ಶಿಕ್ಷಕನಿಂದಾದ ಅವಮಾನಕ್ಕೆ ನೊಂದ ಬಾಲಕಿ ಆತ್ಮಹತ್ಯೆ

ಬೆಳ್ತಂಗಡಿ: ಶಿಕ್ಷಕನಿಂದಾದ ಅವಮಾನಕ್ಕೆ ನೊಂದ ಬಾಲಕಿ ಆತ್ಮಹತ್ಯೆ

ಮಂಗಳೂರು: ಡ್ರಾಯಿಂಗ್ ಶಿಕ್ಷಕನೊಬ್ಬನ ಅವಮಾನಕ್ಕೆ ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಘಟನೆ ನಡೆದಿದ್ದು, ವಿಷ ಸೇವನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ.

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಧರ್ಮಸ್ಥಳದ ನಿವಾಸಿ 16 ವರ್ಷದ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಫೆಬ್ರವರಿ 5ರಂದು ಶಾಲೆಯ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ತನ್ನ ಬಗ್ಗೆ ಇನ್ನೊಂದು ವಿದ್ಯಾರ್ಥಿನಿಗೆ ಅವಮಾನಕರ ರೀತಿಯಲ್ಲಿ ಮೆಸೇಜ್ ಮಾಡಿದ್ದನ್ನು ತಿಳಿದು ನೊಂದ ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿದ್ದಾಳೆ. ಮರುದಿನ ತಾಯಿ ಆಕೆಯ ಜೊತೆಗೆ ಹೋಗಿ ಶಿಕ್ಷಕನನ್ನು ವಿಚಾರಿಸಿದ್ದಾರೆ.

ಬಳಿಕ ಫೆ.7ರಂದು ವಿದ್ಯಾರ್ಥಿನಿ ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಣ ಅಂಗಡಿಯಿಂದ ಖರೀದಿ ಮಾಡಿ ತಂದು ಶಾಲೆಯಲ್ಲಿ ಬಿಸ್ಕೆಟ್ ಜೊತೆ ಇಲಿ ಪಾಶಣ ಪೇಸ್ಟ್ ಮಿಕ್ಸ್ ಮಾಡಿ ಸೇವಿಸಿದ್ದಾಳೆ. ವಿಷಯ ಗಮನಕ್ಕೆ ಬಂದ ತಕ್ಷಣ ಶಾಲೆಯ ಶಿಕ್ಷಕರು ಆಕೆಯನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು.

ವಿದ್ಯಾರ್ಥಿನಿ ಲಿವರ್ ಮತ್ತು ಕಿಡ್ನಿ ನಿಷ್ಕ್ರಿಯವಾಗಿತ್ತು. ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ IPC 354D,509,POSO Act 12 ,75JJ Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರೂಪೇಶ್ ಪೂಜಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಧರ್ಮಸ್ಥಳ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

Join Whatsapp
Exit mobile version