Home ಟಾಪ್ ಸುದ್ದಿಗಳು ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ಗಳ ಅಮಾನತಿಗೆ ನಿರ್ದೇಶಿಸಬೇಕಾದೀತು: ಹೈಕೋರ್ಟ್‌ ಆಕ್ರೋಶ

ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ಗಳ ಅಮಾನತಿಗೆ ನಿರ್ದೇಶಿಸಬೇಕಾದೀತು: ಹೈಕೋರ್ಟ್‌ ಆಕ್ರೋಶ

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಸಂಪೂರ್ಣವಾಗಿ ಅಸಮರ್ಥರಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ, ಎಂಜಿನಿಯರ್‌ ಸೇರಿದಂತೆ ಎಲ್ಲರನ್ನೂ ಅಮಾನತು ಮಾಡಲು ನಾವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಅಮೆರಿಕನ್‌ ರೋಡ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ಗೆ (ಎಆರ್‌ಟಿಎಸ್‌) ಬಿಬಿಎಂಪಿಯು ಅಗತ್ಯ ಸಹಕಾರ ನೀಡದಿದ್ದರೆ ಕಠಿಣ ಆದೇಶ ಮಾಡಲಾಗುವುದು. ಈ ಕುರಿತು ಮುಖ್ಯ ಆಯುಕ್ತರಿಗೆ ತಿಳಿಸಬೇಕು. ಬಿಬಿಎಂಪಿಯಲ್ಲಿ ಆರಾಮವಾಗಿ ಕುಳಿತಿರುವ ಅಧಿಕಾರಿಗಳ ಹಿತಾಸಕ್ತಿಗೆ ವಿರುದ್ಧವಾದ ಆದೇಶವನ್ನು ನ್ಯಾಯಾಲಯ ಮಾಡಬಹುದು. ಇದು ಅತಿಯಾಗಿದ್ದು, ನಾವು ಇನ್ನು ಯಾವುದೇ ಕಾಲಾವಕಾಶ ನೀಡುವುದಿಲ್ಲ. ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ವಿಚಾರಣೆಯಲ್ಲಿ ಅತ್ಯಂತ ಕಠಿಣವಾಗಿ ನಡೆದುಕೊಳ್ಳುತ್ತೇವೆ” ಎಂದು ಬಿಬಿಎಂಪಿ ವಕೀಲರಿಗೆ ಪೀಠವು ಗಂಭೀರ ಮೌಖಿಕ ಎಚ್ಚರಿಕೆ ನೀಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಎಸ್‌ ಆರ್‌ ಅನುರಾಧಾ ಅವರು “ಬಿಬಿಎಂಪಿ ವರದಿ ಪ್ರಕಾರ ಬೆಂಗಳೂರಿನಲ್ಲಿ ಇನ್ನೂ 2,533 ಗುಂಡಿಗಳನ್ನು ಮುಚ್ಚಬೇಕಿದೆ. ಎಆರ್‌ಟಿಎಸ್‌ಗೆ ಪೈಥಾನ್‌ ಯಂತ್ರ ಬಳಸಿ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಕಾರ್ಯಾದೇಶ ನೀಡಿಲ್ಲ. ಪೈಥಾನ್‌ ಯಂತ್ರಕ್ಕೆ ಬದಲಾಗಿ ಹಿಂದಿನ ರೀತಿಯಲ್ಲಿಯೇ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ನ್ಯಾಯಾಲಯವು ಸಾಕಷ್ಟು ಆಸಕ್ತಿ ತೋರಿಸಿ, ಜನರ ಹಿತಾಸಕ್ತಿ ಇಟ್ಟುಕೊಂಡು ಹಲವು ಆದೇಶಗಳನ್ನು ಮಾಡಿದೆ. ಎಆರ್‌ಟಿಎಸ್‌ ಮತ್ತು ಬಿಬಿಎಂಪಿ ಮತ್ತೆ ಹಗ್ಗಜಗ್ಗಾಟದಲ್ಲಿ ತೊಡಗಿವೆ. ಇದು ದುರದೃಷ್ಟಕರ” ಎಂದು ಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಾಲಯವು “ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದ ದರಕ್ಕೆ ಒಪ್ಪಿಗೆ ನೀಡಿದ್ದಾಗಿ ಕಳೆದ ವಿಚಾರಣೆಯಲ್ಲಿ ತಿಳಿಸಿದ್ದಿರಲ್ಲಾ. ಒಪ್ಪಂದ ಮಾಡಿಕೊಳ್ಳಲಾಗಿದೆಯೇ, ಇಲ್ಲವೇ? ತಾತ್ಕಾಲಿಕ ಕಾರ್ಯಾದೇಶ ಎಂದರೇನು? ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮತ್ತೊಂದು ಸಂಸ್ಥೆಗೆ ನೀಡಲು ನಾವು ನಿರ್ದೇಶಿಸುತ್ತೇವೆ. ನಾವು ಎಲ್ಲರನ್ನೂ ತೆಗೆದು, ಸೇನೆ ಏಜೆನ್ಸಿಯನ್ನು ರಸ್ತೆ ಗುಂಡಿ ಮುಚ್ಚಲು ಆದೇಶಿಸುತ್ತೇವೆ. ಸಂಪೂರ್ಣವಾಗಿ ಅಸಮರ್ಥರಾಗಿರುವ ಮುಖ್ಯ ಆಯುಕ್ತರು, ಎಂಜಿನಿಯರ್‌ ಸೇರಿದಂತೆ ಎಲ್ಲರನ್ನೂ ಅಮಾನತು ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಏನು ನಡೆಯುತ್ತಿದೆ ಇಲ್ಲಿ. ನೀವು ತಾತ್ಕಾಲಿಕ ಕಾರ್ಯಾದೇಶದ ಬಗ್ಗೆ ಮಾತನಾಡುತ್ತಿದ್ದೀರಿ. ನಾಳೆಯೊಳಗೆ ನಗರದ ಎಲ್ಲಾ ರಸ್ತೆಗಳಿಗೆ ಸಂಬಂಧಿಸಿದ ಕಾರ್ಯಾದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ಬಿಬಿಎಂಪಿ ಹಿತಾಸಕ್ತಿಗೆ ವಿರುದ್ಧವಾದ ಆದೇಶವನ್ನು ನಾವು ಮಾಡಬೇಕಾಗುತ್ತದೆ. ಇದು ಅತಿಯಾಯಿತು. ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಜಂಟಿ ಸಮೀಕ್ಷಾ ವರದಿ ಎಲ್ಲಿ? ಬಿಬಿಎಂಪಿ ಸಮ್ಮುಖದಲ್ಲಿ ಜಂಟಿ ಸರ್ವೆ ನಡೆಯಬೇಕಿತ್ತು. ನಾಳೆ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತೇವೆ. ಅಷ್ಟರೊಳಗೆ ಒಪ್ಪಂದದ ಕರಾರು, ಕಾರ್ಯಾದೇಶ ಮತ್ತು ಜಂಟಿ ಸಮೀಕ್ಷಾ ವರದಿಯನ್ನು ಸಲ್ಲಿಸಬೇಕು” ಎಂದು ಬಿಬಿಎಂಪಿ ವಕೀಲರಿಗೆ ತಾಕೀತು ಮಾಡಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ರಸ್ತೆಗುಂಡಿ ಮುಚ್ಚುವುದಕ್ಕೆ ಪ್ರತಿ ಚದರ ಮೀಗೆ 598 ರೂಪಾಯಿ ಪಡೆಯಲು ಎಆರ್‌ಟಿಎಸ್‌ ಒಪ್ಪಿಕೊಂಡಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಕರಾರು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಡಳಿತಾತ್ಮಕ ಅನುಮೋದನೆ ಬಾಕಿ ಇದೆ. ಸಾಕಷ್ಟು ಚರ್ಚೆಯ ಬಳಿಕ ಬಿಬಿಎಂಪಿ-ಆರ್‌ಟಿಎಸ್‌ ಪೈಥಾನ್‌ ಯಂತ್ರ ಬಳಕೆಯ ಪ್ರತಿ ಚದರ ಮೀ ಗೆ 598 ರೂಪಾಯಿಗೆ ಒಪ್ಪಿಕೊಂಡಿವೆ. ಈ ಸಂಬಂಧದ ಕರಡು ಒಪ್ಪಂದ ಕರಾರನ್ನು ನಿನ್ನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸ್ಥಿತಿಗತಿ ವರದಿ ಸಲ್ಲಿಸಿದ್ದೇವೆ. ಜಂಟಿ ಸಮೀಕ್ಷಾ ವರದಿಯನ್ನು ಎಆರ್‌ಟಿಎಸ್‌ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿತ್ತು. ಜಂಟಿ ಸರ್ವೆ ಪ್ರಕಾರ 951 ರಸ್ತೆಗಳನ್ನು ಪತ್ತೆ ಮಾಡಿದ್ದೇವೆ” ಎಂದು ನ್ಯಾಯಾಲಯಕ್ಕೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಅಂತಿಮವಾಗಿ ಪೀಠವು ಎಆರ್‌ಟಿಎಸ್‌ ಸಲ್ಲಿಸಿರುವ ಮೆಮೊವನ್ನು ಸ್ವೀಕರಿಸಲಾಗಿದ್ದು, ಪೈಥಾನ್‌ ಯಂತ್ರದ ಮೂಲಕ ಪ್ರತಿ ಚದರ ಮೀ ರಸ್ತೆ ಗುಂಡಿ ಮುಚ್ಚಲು 598 ರೂಪಾಯಿಯನ್ನು ಅಂತಿಮವಾಗಿ ಸಮಗ್ರವಾದ ದರ ವಿಧಿಸಲು ಬಿಬಿಎಂಪಿ-ಎಆರ್‌ಟಿಎಸ್‌ ಒಪ್ಪಿಕೊಂಡಿವೆ. ಈ ದರವು ಜಿಎಸ್‌ಟಿ ಹೊರತುಪಡಿಸಿದ್ದಾಗಿದೆ. ಈ ಸಂಬಂಧ ಒಪ್ಪಂದದ ಕರಾರು ಮತ್ತು ಕಾರ್ಯಾದೇಶವನ್ನು ಇಲ್ಲಿಯವರೆಗೆ ನೀಡಲಾಗಿಲ್ಲ. ಅಲ್ಲದೇ, ನ್ಯಾಯಾಲಯದ ಹಿಂದಿನ ಆದೇಶದಂತೆ ಜಂಟಿ ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಆದೇಶದಲ್ಲಿ ದಾಖಲಿಸಿತು.

ಗುಂಡಿ ಮುಚ್ಚಲು ಆದ್ಯತೆ ನೀಡುವಂತೆ ಎಆರ್‌ಟಿಎಸ್‌, ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ; ಪ್ರಧಾನ ಎಂಜಿನಿಯರ್‌ ಬದಲಾವಣೆ

ಎಆರ್‌ಟಿಎಸ್‌ ವಕೀಲರು “1,392.71 ಕಿ ಮೀ ಪೈಕಿ 397 ಕಿ ಮೀ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ನೀಡಲಾಗಿದೆ. 2019ರಿಂದ ಬಿಬಿಎಂಪಿಯು ಬಾಕಿ ಹಣ ಪಾವತಿಸದಿರುವುದರಿಂದ ಎಆರ್‌ಟಿಎಸ್‌ ಆರ್ಥಿಕ ಬಿಕ್ಕಿಟ್ಟಿಗೆ ಸಿಲುಕಿದೆ” ಎಂದು ಪೀಠಕ್ಕೆ ತಿಳಿಸಿದ್ದನ್ನೂ ನ್ಯಾಯಾಲಯ ದಾಖಲಿಸಿಕೊಂಡಿತು.

“ಬಿಬಿಎಂಪಿ ವಕೀಲ ಶ್ರೀನಿಧಿ ಅವರು ಎಆರ್‌ಟಿಎಸ್‌ಗೆ ರಸ್ತೆ ಗುಂಡಿ ಮುಚ್ಚುವ ಕೆಲಸ ನೀಡಲಾಗಿದ್ದು, ಈ ಕುರಿತು ಒಪ್ಪಂದದ ಕರಾರು, ಕಾರ್ಯಾದೇಶ ಮತ್ತು ಜಂಟಿ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ, ಗುರುವಾರಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು, ಸಂಬಂಧ ಪಟ್ಟ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಪೀಠವು ಆದೇಶ ಮಾಡಿದೆ.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version